Tuesday, 23 November 2021

ಮೋದಿ ಸರಕಾರ ಬೇಕಿದ್ದರೆ ಕಂಗನಾರನ್ನು ಆಝಾದಿ ಕಾ ಅಮೃತ್ ಮಹೋತ್ಸವ್ ರಾಯಭಾರಿಯಾಗಿ ನೇಮಿಸಿಕೊಳ್ಳಲಿ: ರಕ್ಷಾ ರಾಮಯ್ಯ

 ಮೋದಿ ಸರಕಾರ ಬೇಕಿದ್ದರೆ ಕಂಗನಾರನ್ನು ಆಝಾದಿ ಕಾ ಅಮೃತ್ ಮಹೋತ್ಸವ್ ರಾಯಭಾರಿಯಾಗಿ ನೇಮಿಸಿಕೊಳ್ಳಲಿ: ರಕ್ಷಾ ರಾಮಯ್ಯ

ಬೆಂಗಳೂರು: ಸ್ವಾತಂತ್ರ್ಯ ಸಂಗ್ರಾಮದ ವೀರ ಸೇನಾನಿಗಳ ವಿರುದ್ಧ ಕ್ರೂರ ಮತ್ತು ಮಾನಹಾನಿಯಾಗುವ ರೀತಿಯಲ್ಲಿ ಮಾತನಾಡಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಹಾಗೂ ಮಹತ್ಮಾ ಗಾಂಧೀಜಿ–ಪಂಡಿತ್ ಜವಾಹರ್ ಲಾಲ್ ನೆಹರು ವಿರುದ್ಧ ಅವಹೇಳನಕಾರಿಯಾಗಿ ಟೀಕೆ ಮಾಡಿರುವ ಪತ್ರಕರ್ತ ಅಜಿತ್ ಬಾರ್ತಿ ವಿರುದ್ಧ ದೇಶ ದ್ರೋಹ ಪ್ರಕರಣದಡಿ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ರಕ್ಷಾ ರಾಮಯ್ಯ ನೇತೃತ್ವದ ನಿಯೋಗ ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.  

ಕಂಗನಾ ರಣಾವತ್ ಮತ್ತು ಅಜಿತ್ ಬಾರ್ತಿ ವಿರುದ್ಧ ಕ್ರಮಕ್ಕೆ ಮನವಿ ಮಾಡಿದೆ. ದೇಶ ದ್ರೋಹವೆಸಗಿರುವ ಇವರ ವಿರುದ್ಧ ಭಾರತೀಯ ದಂಡ ಸಂಹಿತೆಯ 124-ಎ, 153-ಎ, 500, 504, 505 ಹಾಗೂ ರಾಷ್ಟ್ರೀಯ ಸ್ವಾತಂತ್ರ್ಯ ಚಳವಳಿಯ ನಾಯಕರ ವಿರುದ್ಧ ಮಾಡಿದ ಮಾನಹಾನಿಕರ ಟೀಕೆಗಳು, ಕಾನೂನುಬಾಹಿರ ಚಟುವಟಿಕೆಗಳ(ತಡೆಗಟ್ಟುವಿಕೆ) ಕಾಯಿದೆ, 1967 ರ ಸೆಕ್ಷನ್ 13 ಅಡಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದೆ.

ಕಂಗನಾ ರಣಾವತ್ ದೇಶಕ್ಕೆ 1947 ರಲ್ಲಿ ದೊರೆತಿದ್ದು ಸ್ವಾತಂತ್ರ್ಯವಲ್ಲ. ಅದು ಭಿಕ್ಷೆ, ನಿಮಗೆ ನಿಜವಾದ ಸ್ವಾತಂತ್ರ್ಯ ದೊರೆತಿದ್ದು, 2014 ರಲ್ಲಿ ಎಂದು ಹೇಳುವ ಮೂಲಕ ಸ್ವಾತಂತ್ರ್ಯ ಸೇನಾನಿಗಳಿಗೆ ಘೋರ ಅಪಮಾನ ಮಾಡಿದ್ದಾರೆ. ಇದೇ ರೀತಿ ಅಜಿತ್ ಬಾರ್ತಿ ವಿರುದ್ಧವೂ ಕ್ರಮ ತೆಗೆದುಕೊಳ್ಳುವಂತೆ ಕೆಪಿವೈಸಿಸಿ ಕಾನೂನು ಘಟಕ ತನ್ನ ದೂರಿಯಲ್ಲಿ ತಿಳಿಸಿದೆ. 

ದೂರು ದಾಖಲಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಎಂ.ಎಸ್.ರಕ್ಷಾ ರಾಮಯ್ಯ, ದೇಶ 75 ನೇ ಸ್ವಾತಂತ್ರ್ಯೋತ್ಸವದ ಆಝಾದಿ ಕಾ ಅಮೃತ್ ಮಹೋತ್ಸವ್ ಆಚರಿಸುತ್ತಿರುವ ಸಂದರ್ಭದಲ್ಲಿ ನಟಿ ಕಂಗನಾ ರಣಾವತ್ ಮಾಡಿರುವ ಟೀಕೆಯಿಂದ ಭಾರತದ ಕೀರ್ತಿಗೆ ದೇಶ ವಿದೇಶಗಳಲ್ಲಿ ಧಕ್ಕೆಯಾಗಿದೆ. ಇವರ ವಿರುದ್ಧ ಈವರೆಗೆ ಕೇಂದ್ರದ ಬಿಜೆಪಿ ಸರಕಾರ ಕ್ರಮ ಕೈಗೊಂಡಿಲ್ಲ. ಕಂಗನಾ ರಣಾವತ್ ನಿಜವಾದ ದೇಶ ಭಕ್ತೆಯಾಗಿದ್ದರೆ ಅವರನ್ನು ಪ್ರಧಾನಿ ನರೇಂದ್ರ ಮೋದಿ ‘ಆಝಾದಿ ಕಾ ಅಮೃತ್ ಮಹೋತ್ಸವ್’ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿಕೊಳ್ಳುವುದು ಸೂಕ್ತ ಎಂದು ಕಿಡಿಕಾರಿದರು.

ಕಂಗನಾ ರಣಾವತ್ ಹೇಳಿರುವುದು ಸೂಕ್ತ ಎಂದು ಕಂಡು ಬಂದಲ್ಲಿ ಮೋದಿ ಸರಕಾರ ಬೇಕಿದ್ದರೆ ನವ ಭಾರತದ ರಾಯಭಾರಿಯಾಗಿ ನೇಮಕ ಮಾಡಿಕೊಳ್ಳಲಿ. ಗಾಂಧೀಜಿ ಅವರ ಹೋರಾಟವನ್ನು ಅತ್ಯಂತ ಕೀಳು ಮಟ್ಟದಿಂದ ಧಿಕ್ಕರಿಸಿರುವ ಈ ನಟಿಯನ್ನು ಸ್ವಚ್ಛ ಭಾರತ ಅಭಿಯಾನಕ್ಕೆ ಬೇಕಿದ್ದರೆ ಬಳಸಿಕೊಳ್ಳಲಿ. ಸ್ವಚ್ಛತಾ ಅಭಿಯಾನದಲ್ಲಿ ಮಹಾತ್ವಾ ಗಾಂಧೀಜಿ ಕನ್ನಡಕದ ಲೋಗೋ ತೆಗೆದು ಕಂಗನಾ ರಣಾವತ್ ಲೋಗೋ ಬೇಕಿದ್ದರೆ ಹಾಕಿಕೊಳ್ಳಲಿ ಎಂದು ರಕ್ಷಾ ರಾಮಯ್ಯ ವ್ಯಂಗ್ಯವಾಡಿದರು.

ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಇನ್ನೂ ಹಲವು ವೀರ ಸ್ವಾತಂತ್ರ್ಯ ಹೋರಾಟಗಾರರು ಈಗಲೂ ನಮ್ಮ ಜತೆ ಬದುಕಿದ್ದಾರೆ. ಇಂತಹ ದೇಶ ದ್ರೋಹಿಗಳನ್ನು ಮುಂದಿಟ್ಟುಕೊಂಡು ಆಝಾದಿ ಕಾ ಅಮೃತ್ ಮಹೋತ್ಸವ್ ಕಾರ್ಯಕ್ರಮವನ್ನು ಹೇಗೆ ಮುಂದುವರೆಸುತ್ತೀರಿ ಎಂದು ರಕ್ಷಾ ರಾಮಯ್ಯ ಪ್ರಶ್ನಿಸಿದರು.

ಇದೇ ರೀತಿಯಲ್ಲಿ ಭಾರತದ ಸಾರ್ವಭೌಮತ್ವವನ್ನು ಪ್ರಶ್ನಿಸಿರುವ ಅಜಿತ್ ಬಾರ್ತಿ ವಿರುದ್ಧವೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಯುವ ಕಾಂಗ್ರೆಸ್ ತನ್ನ ಹೋರಾಟ ತೀವ್ರಗೊಳಿಸಲಿದೆ ಎಂದು ರಕ್ಷಾ ರಾಮಯ್ಯ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಚಾಣಕ್ಯ, ಜವಾಹರ್ ಲಾಲ್ ಬಾಲ ಭವನದ ಅಧ್ಯಕ್ಷ ಸಿರಿಲ್ ಪ್ರಭು, ಕೆಪಿವೈಸಿಸಿ ಕಾರ್ಯದರ್ಶಿ ವಿಜಯ್ ಆನಂದ್ ಉಪಸ್ಥಿತರಿದ್ದರು.


SHARE THIS

Author:

0 التعليقات: