Monday, 1 November 2021

ಇಂಧನ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್‌ ರಸ್ತೆತಡೆ: ʼಜನರಿಗೆ ತೊಂದರೆ ಮಾಡಬೇಡಿʼ ಎಂದ ನಟ ಜೋಜು ಜಾರ್ಜ್‌ ಕಾರಿಗೆ ಹಾನಿ


 ಇಂಧನ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್‌ ರಸ್ತೆತಡೆ: 'ಜನರಿಗೆ ತೊಂದರೆ ಮಾಡಬೇಡಿ' ಎಂದ ನಟ ಜೋಜು ಜಾರ್ಜ್‌ ಕಾರಿಗೆ ಹಾನಿ

ಕೊಚ್ಚಿ: ಇಂಧನ ಬೆಲೆಯೇರಿಕೆ ವಿರೋಧಿಸಿ ಕಾಂಗ್ರೆಸ್ ಪಕ್ಷ ಕೇರಳದಲ್ಲಿ ಇಂದು ಆಯೋಜಿಸಿದ್ದ ಪ್ರತಿಭಟನೆಯ ವೇಳೆ ಮಲಯಾಳಂ ನಟ ಜೋಜು ಜಾರ್ಜ್ ಹಾಗೂ ಪ್ರತಿಭಟನಾಕಾರರ ನಡುವೆ ಘರ್ಷಣೆಗೆ ಕಾರಣವಾಗಿ ಹಿಂಸಾತ್ಮಕ ರೂಪ ತಳೆದಿದೆ.

ಕಾಂಗ್ರೆಸ್ ಕಾರ್ಯಕರ್ತರು ಪಳರಿವತ್ತೊಂ-ವೈತ್ತಿಲ ಬೈಪಾಸ್ ಸಮೀಪ ಪ್ರತಿಭಟನೆ ನಡೆಸಿದ ಕಾರಣ ಇಲ್ಲಿ ವಾಹನ ಸಂಚಾರ ಬಾಧಿತವಾಗಿತ್ತು. ಈ ಸಂದರ್ಭ ಕಾರಿನಲ್ಲಿ ಆ ಪ್ರದೇಶಕ್ಕೆ ಆಗಮಿಸಿದ್ದ ನಟ ಜೋಜು ಜಾರ್ಜ್ ಅವರು ಪ್ರತಿಭಟನೆಯ ಹೆಸರಿನಲ್ಲಿ ರಸ್ತೆತಡೆ ನಡೆಸಿ ಜನರಿಗೆ ತೊಂದರೆ ಉಂಟು ಮಾಡುವುದರ ಕುರಿತು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ನಟ ಮದ್ಯದ ಅಮಲಿನಲ್ಲಿದ್ದರು ಹಾಗೂ ಮಹಿಳಾ ಪ್ರತಿಭಟನಾಕಾರರನ್ನು ನಿಂದಿಸಿದ್ದರು ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.

ಜಗಳ ತಾರಕಕ್ಕೇರಿದ ನಂತರ ನಟನ ವಾಹನವನ್ನು ಪ್ರತಿಭಟನಾಕಾರರು ಹಾನಿಗೈದ ಪರಿಣಾಮ ಅದರ ಹಿಂಬದಿಯ ವಿಂಡ್‍ಶೀಲ್ಡ್  ಹುಡಿಯಾಗಿದೆ. ನಂತರ ಪೊಲೀಸರು ನಟನನ್ನು ವೈದ್ಯಕೀಯ ತಪಾಸಣೆಗೆಂದು ಕರೆದೊಯ್ದರು.

"ರಸ್ತೆ ತಡೆಯಿಂದ ಎರಡು ಗಂಟೆ ವಾಹನ ಸಂಚಾರ ಬಾಧಿತವಾಗಿತ್ತು. ಕ್ಯಾನ್ಸರ್ ಚಿಕಿತ್ಸೆಗಾಗಿ ಮಗುವೊಂದನ್ನು ಕರೆದೊಯ್ಯುತ್ತಿದ್ದ ವಾಹನ ಕೂಡ ವಾಹನಗಳ ನಡುವೆ ಸಿಲುಕಿಕೊಂಡಿತ್ತು. ಹೈಕೋರ್ಟ್ ಆದೇಶಾನುಸಾರ ರಸ್ತೆಗಳಲ್ಲಿ ವಾಹನ ಸಂಚಾರವನ್ನು ಈ ರೀತಿ ಅಡ್ಡಗಟ್ಟಲು ಸಾಧ್ಯವಿಲ್ಲ. ನಾನು ಮಧ್ಯ ಸೇವಿಸಿಲ್ಲ. ಅದಕ್ಕಾಗಿ ಯಾವುದೇ ಪರೀಕ್ಷೆಗೆ ಒಳಗಾಗಲೂ ಸಿದ್ಧ" ಎಂಬುದು ಜೋಜು ಜಾರ್ಜ್ ಅವರ ವಾದವಾಗಿತ್ತು.

ತಾವು ಮದ್ಯದ ನಶೆಯಲ್ಲಿಲ್ಲ ಹಾಗೂ ಯಾರ ಜತೆಗೂ ಅನುಚಿತವಾಗಿ ವರ್ತಿಸಿಲ್ಲ ಎಂದೂ ಅವರು ಹೇಳಿದ್ದಾರೆ.

ಪೊಲೀಸರು ಘಟನೆಯ ವೀಡಿಯೋವನ್ನು ಪರಿಶೀಲಿಸುತ್ತಿರುವುದಾಗಿ ತಿಳಿಸಿದ್ದು ನಟನ ವೈದ್ಯಕೀಯ ವರದಿಯ ಆಧಾರದಲ್ಲಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿದ ಕೇರಳ ಕಾಂಗ್ರೆಸ್ ಅಧ್ಯಕ್ಷ ಕೆ ಸುಧಾಕರನ್, ನಟ `ಕ್ರಿಮಿನಲ್' ರೀತಿ ವರ್ತಿಸಿದ್ದಾರೆಂದು ಆರೋಪಿಸಿದ್ದಾರೆ.


SHARE THIS

Author:

0 التعليقات: