ಹೈದರ್ಪೋರಾ ಎನ್ ಕೌಂಟರ್:
ತಂದೆಯ ಹತ್ಯೆ, ಕಾಶ್ಮೀರಿ ಬಾಲಕಿಯ ಕಣ್ಣೀರು.
ಶ್ರೀನಗರ: ಜಮ್ಮು ಹಾಗೂ ಕಾಶ್ಮೀರದಲ್ಲಿ ಸೋಮವಾರ ನಡೆದ ಭದ್ರತಾ ಕಾರ್ಯಾಚರಣೆ ವೇಳೆ ತನ್ನ ತಂದೆಯ ಹತ್ಯೆ ಬಗ್ಗೆ ಕಾಶ್ಮೀರಿ ಬಾಲಕಿಯೊಬ್ಬಳು ಅಳುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಶ್ರೀನಗರದ ವಾಣಿಜ್ಯ ಸಂಕೀರ್ಣದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಇದರಲ್ಲಿ ಉದ್ಯಮಿ ಮುಹಮ್ಮದ್ ಅಲ್ತಾಫ್ ಭಟ್ ಕೂಡ ಸೇರಿದ್ದಾರೆ. ಪೊಲೀಸರ ಪ್ರಕಾರ ಒಬ್ಬ ಪಾಕಿಸ್ತಾನಿ ಭಯೋತ್ಪಾದಕ ಹಾಗೂ ಆತನ ಸಹಚರರನ್ನು ಭದ್ರತಾ ಪಡೆಗಳು ಕೊಂದಿವೆ.
ಅಲ್ತಾಫ್ ಭಟ್ ಹಾಗೂ ಮತ್ತೊಬ್ಬ ಉದ್ಯಮಿ ಭಯೋತ್ಪಾದಕರ ಗುಂಡಿಗೆ ಬಲಿಯಾಗಿದ್ದರು ಎಂದು ಪೊಲೀಸರು ಮೊದಲು ಹೇಳಿದ್ದರು. ಆದರೆ ನಂತರ ಅವರು ಕ್ರಾಸ್ ಫೈರ್ನಲ್ಲಿ ಸಾವನ್ನಪ್ಪಿರಬಹುದು ಎಂದು ಹೇಳಿದ್ದರು.
ಕಾಂಪ್ಲೆಕ್ಸ್ ಮಾಲಿಕ ಅಲ್ತಾಫ್ ಭಟ್ ಅವರು ತಮ್ಮ ಬಾಡಿಗೆದಾರರ ಬಗ್ಗೆ ಅಧಿಕಾರಿಗಳಿಗೆ ತಿಳಿಸದ ಕಾರಣ ಅವರನ್ನು "ಭಯೋತ್ಪಾದಕರ ರಕ್ಷಕ" ಎಂದು ಪರಿಗಣಿಸಲಾಗುವುದು ಎಂದು ಪೊಲೀಸರು ಹೇಳಿದರು. ಆ ಬಾಡಿಗೆದಾರರಲ್ಲಿ ಒಬ್ಬ ಭಯೋತ್ಪಾದಕನಾಗಿದ್ದ ಎಂದು ನಂತರ ಪೊಲೀಸರು ಹೇಳಿದ್ದಾರೆ.
ವ್ಯಾಪಕವಾಗಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ, ಭಟ್ ಅವರ 13 ವರ್ಷದ ಮಗಳು ತಂದೆಯ ಸಾವಿನ ಬಗ್ಗೆ ತಿಳಿದ ಕ್ಷಣವನ್ನು ಕಣ್ಣೀರಿನೊಂದಿಗೆ ವಿವರಿಸಿದ್ದಾರೆ.
"ನನ್ನ ಚಾಚು (ಚಿಕ್ಕಪ್ಪ) ಬೆಳಗ್ಗೆ 10 ಗಂಟೆಯ ಸುಮಾರಿಗೆ ನನಗೆ ಕರೆ ಮಾಡಿದರು ಹಾಗೂ ಅವರು ಅಳಲು ಆರಂಭಿಸಿದರು. ನಾನು ಮನೆಯಲ್ಲೇ ಇದ್ದೆ. ಕೂಗಾಟ, ಚೀರಾಟದ ಶಬ್ದ ಕೇಳಿ ಬರಲು ಪ್ರಾರಂಭವಾಯಿತು. ನಾನು ಬಹಳ ಹೆದರಿದೆ. ಅಲ್ಲಿಂದ ಓಡಿದೆ. ಅಲ್ಲಾಹನಲ್ಲಿ ಪ್ರಾರ್ಥಿಸಲು ಪ್ರಾರಂಭಿಸಿದೆ” ಎಂದು ಕಣ್ಣೀರಿಡುತ್ತಾ ಬಾಲಕಿ ಹೇಳಿದ್ದಾಳೆ.
"ನನ್ನ ತಂದೆಯನ್ನು ಎರಡು ಬಾರಿ ಬಿಟ್ಟುಬಿಡಲಾಯಿತು. ಮೂರನೇ ಬಾರಿ ನನ್ನ ತಂದೆನ್ನು ಕೊಲ್ಲಲಾಯಿತು ಎಂದು ಘಟನೆಗೆ ಸಾಕ್ಷಿಯಾಗಿದ್ದ ನನ್ನ ಸೋದರಸಂಬಂಧಿ ಹೇಳಿದರು. ಇದರ ಅರ್ಥವೇನು?" ಎಂದು ಬಾಲಕಿ ಪ್ರಶ್ನಿಸಿದ್ದಾಳೆ.
"ಮತ್ತೆ ನಾನು ಅವರಲ್ಲಿ ಅಂಕಲ್ ನೀವೇನು ಮಾಡಿದಿರಿ, ನನ್ನ ತಂದೆಯ ತಪ್ಪೇನು ? ಎಂದು ಕೇಳಿದ್ದಕ್ಕೆ ಅವರು ನಗುತ್ತಿದ್ದರು. ಅಂತಹವರಲ್ಲಿ ನಾನು ಏನೆಂದು ಹೇಳಲಿ? ಅವರು ನಾಚಿಕೆಯಿಲ್ಲದೆ ನಗುತ್ತಿದ್ದರು" ಬಾಲಕಿ ಹೇಳಿದ್ದಾಳೆ.
"ನಾನು ನನ್ನ ತಾಯಿಯನ್ನು ಹೇಗೆ ನೋಡಿಕೊಳ್ಳುವುದು? ತಾಯಿ ಏನನ್ನೂ ತಿನ್ನುತ್ತಿಲ್ಲ, ಆಕೆ ಅಳುತ್ತಾಳೆ, ನಾನು ಏನು ಮಾಡಬೇಕು?"ಎಂದು ಬಾಲಕಿ ಹೇಳಿರುವ ವೀಡಿಯೋ ವೈರಲ್ ಆಗಿದೆ.
0 التعليقات: