Sunday, 21 November 2021

ರಾಜ್ಯ ಸರಕಾರದಿಂದ ನೆರೆ ಪರಿಹಾರ ಬಿಡುಗಡೆ

ರಾಜ್ಯ ಸರಕಾರದಿಂದ ನೆರೆ ಪರಿಹಾರ ಬಿಡುಗಡೆ

ಬೆಂಗಳೂರು, ನ. 21: ಜುಲೈ ಮತ್ತು ಆಗಸ್ಟ್ ತಿಂಗಳ ನೆರೆ ಪರಿಹಾರ ಘೋಷಣೆ ಮಾಡಿದ್ದು, ನೆರೆ ಪ್ರದೇಶಗಳಿಗೆ ನೀರು ನುಗ್ಗಿರುವ ಮನೆಗಳ ಗೃಹೋಪಯೋಗಿ ವಸ್ತುಗಳು ಹಾಗೂ ಬಟ್ಟೆ-ಬರೆ ಹಾನಿಗೆ ಒಟ್ಟು 10 ಸಾವಿರ ರೂ.ಪರಿಹಾರ, ಶೇ.75 ಕ್ಕಿಂತ ಹೆಚ್ಚು ಪೂರ್ಣ ಮನೆ ಹಾನಿಗೆ 5ಲಕ್ಷ ರೂ., ಶೇ.25-75ರಷ್ಟು ತೀವ್ರ ಮನೆ ಹಾನಿಗೆ 3 ಲಕ್ಷರೂ. ಹಾಗೂ ಶೇ. 15-25 ಭಾಗಶಃ ಮನೆ ಹಾನಿಗೆ 50 ಸಾವಿರ ರೂ.ಪರಿಹಾರ ಘೋಷಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಮುಂಗಾರು ಅವಧಿಯ ಜುಲೈ 22 ರಿಂದ 26ರ ವರೆಗೂ ರಾಜ್ಯದಲ್ಲಿ ಸುರಿದಂತಹ ಮಳೆಯಿಂದಾಗಿ ಹಾಗೂ ಮಹಾರಾಷ್ಟ್ರದ ಜಲಾಶಯಗಳಿಂದ ಸುಮಾರು 4.5 ಲಕ್ಷ ಕ್ಯೂಸೆಕ್ಸ್ ನೀರು ಹೊರ ಹರವಿನಿಂದ ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ಧಾರವಾಡ, ವಿಜಯಪುರ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಹಲವು ನದಿಗಳ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಇನ್ನು ಮಲೆನಾಡಿನ ಕೆಲವು ಭಾಗಗಳಲ್ಲಿ ಸುರಿದ ಭಾರೀ ಮಳೆಯಿಂದ ಪ್ರವಾಹ ಹಾಗೂ ತೀವ್ರವಾದ ಭೂ ಕುಸಿತ ಉಂಟಾಗಿತ್ತು. ಹಾಗಾಗಿ ಈ ಭಾಗದಲ್ಲಿ ಸುರಿದ ಭಾರಿ ಮಳೆ ಪ್ರಮಾಣ, ಪ್ರವಾಹದಿಂದ ಜಲಾವೃತಗೊಂಡ ಪ್ರದೇಶ ಹಾಗೂ ಇವುಗಳಿಂದಾದ ಹಾನಿಯನ್ನು ಪರಿಗಣಿಸಿ, ರಾಜ್ಯದ 86 ತಾಲೂಕುಗಳನ್ನು ಹಾಗೂ ಆಗಸ್ಟ್ ಮೊದಲನೇ ವಾರದಲ್ಲಿ ಕಲಬುರಗಿ ಹಾಗೂ ಬೀದರ್ ಜಿಲ್ಲೆಯಲ್ಲಿ ಬಿದ್ದಂತಹ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿಯನುಸಾರ 13 ತಾಲೂಕುಗಳನ್ನು ಸೇರಿ ಒಟ್ಟು 99 ತಾಲೂಕುಗಳನ್ನು ಪ್ರವಾಹ ಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ.


SHARE THIS

Author:

0 التعليقات: