Wednesday, 17 November 2021

ಪಾಕ್‌ನಲ್ಲಿ ಇಮ್ರಾನ್‌ ಕಾಲ ಮುಗಿಯಿತೇ?


ಪಾಕ್‌ನಲ್ಲಿ ಇಮ್ರಾನ್‌ ಕಾಲ ಮುಗಿಯಿತೇ?

ಪಾಕಿಸ್ಥಾನದಲ್ಲಿ ಮತ್ತೊಮ್ಮೆ ಅರಾಜಕತೆ ಸೃಷ್ಟಿಯಾಗುವ ಎಲ್ಲ ಲಕ್ಷಣಗಳು ತೋರುತ್ತಿವೆ. ಪಾಕಿಸ್ಥಾನ ಸೇನೆ ಮತ್ತು ಪ್ರಧಾನಿ ಇಮ್ರಾನ್‌ ಖಾನ್‌ ನಡುವಿನ ವಿರಸ ತಾರಕಕ್ಕೇರಿದ್ದು, ಸದ್ಯದಲ್ಲೇ ದೇಶಭ್ರಷ್ಟರಾಗಿರುವ ಮಾಜಿ ಪ್ರಧಾನಿ ನವಾಜ್‌ ಶರೀಫ್ ವಾಪಸ್‌ ಬರಲಿದ್ದಾರೆ.

ಇವರೇ ದೇಶದ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ಮಾತುಗಳು ದಟ್ಟವಾಗಿವೆ. ಐಎಸ್‌ಐ ಮುಖ್ಯಸ್ಥರ ನೇಮಕ ವಿಚಾರದಲ್ಲಿ ಸೇನೆ ಮತ್ತು ಇಮ್ರಾನ್‌ ನಡುವಿನ ಮುನಿಸು ಉಲ್ಬಣವಾಗಿದ್ದು, ಅವರ ಪದಚ್ಯುತಿಗೆ ಇದೇ ಕಾರಣವಾಗಬಹುದು ಎಂದೇ ಹೇಳಲಾಗುತ್ತಿದೆ. ಇದೇ 20ನೇ ತಾರೀಖು, ಶನಿವಾರ ಇಮ್ರಾನ್‌ ಖಾನ್‌ ಅವರ ಆಡಳಿತಾವಧಿಯ ಕಡೇ ದಿನ ಎಂದು ಮೂಲಗಳು ಹೇಳುತ್ತಿವೆ.

ಐಎಸ್‌ಐ ಗಲಾಟೆ

ಸದ್ಯ ಪಾಕಿಸ್ಥಾನದ ಐಎಸ್‌ಐ ಮುಖ್ಯಸ್ಥರಾಗಿರುವ ಲೆ|ಜ| ಫ‌ಯಜ್‌ ಹಮೀದ್‌ ಅವರನ್ನು ಮುಂದುವರಿಸಬೇಕು ಎಂಬುದು ಪ್ರಧಾನಿ ಇಮ್ರಾನ್‌ ಖಾನ್‌ ಅವರ ಹಠ. ಆದರೆ ಪಾಕ್‌ ಸೇನೆ ಮಾತ್ರ ಇವರನ್ನು ಮುಂದುವರಿಸಲು ಒಪ್ಪಿರಲಿಲ್ಲ. ಈ ಬಗ್ಗೆ ಹಲವಾರು ದಿನಗಳ ವರೆಗೆ ಬಿಕ್ಕಟ್ಟು ಮುಂದುವರಿದೇ ಇತ್ತು. ಕಡೆಗೂ ಸೇನೆಯ ಒತ್ತಾಯಕ್ಕೆ ಮಣಿದ ಇಮ್ರಾನ್‌ ಖಾನ್‌, ಹಮೀದ್‌ರನ್ನು ಬದಲಿಸಲು ಒಪ್ಪಿದರು. ಇವರಿಗೆ ಬದಲಾಗಿ ಲೆ| ಜನರಲ್‌ ನದೀಮ್‌ ಅಂಜುಮ್‌ ಅವರನ್ನು ಐಎಸ್‌ಐ ಡಿಜಿಯಾಗಿ ನೇಮಕ ಮಾಡಲು ಒಪ್ಪಿದರು. ಇವರು ಇದೇ 20ರಂದು ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಅಂದೇ ಇಮ್ರಾನ್‌ ಪಾಲಿಗೆ ಕಡೇ ದಿನ ಎಂದು ಹೇಳಲಾಗುತ್ತಿದೆ.ಡಿಸೆಂಬರ್ ಅಂತ್ಯದೊಳಗೆ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುವಂತೆ ಹೈಕೋರ್ಟ್​ ನಿರ್ದೇಶನ

ಅಲ್ಪಮತಕ್ಕೆ ಕುಸಿಯುವ ಭೀತಿ

ಪಾಕಿಸ್ಥಾನ ಸೇನೆ ಇಮ್ರಾನ್‌ ಖಾನ್‌ ಪದಚ್ಯುತಿಗೆ ನೇರವಾಗಿ ಪ್ರಯತ್ನಿಸದೇ, ಹಿಂಬಾಗಿಲ ಮೂಲಕ ಎಲ್ಲ ರೀತಿಯ ಸಂಚು ರೂಪಿಸುತ್ತಿದೆ. ಟೆಹ್ರಿಕ್‌ ಎ ತಾಲಿಬಾನ್‌ ಉಗ್ರ ಸಂಘಟನೆಯ ಸದಸ್ಯರನ್ನು ಜೈಲಿನಿಂದ ಬಿಡುಗಡೆ ಮಾಡುತ್ತಿದ್ದ ಹಾಗೆ, ಇತ್ತ ಇಮ್ರಾನ್‌ ಖಾನ್‌ ಸರಕಾರಕ್ಕೆ ನೀಡಲಾಗಿದ್ದ ಬೆಂಬಲವನ್ನು ಮುತ್ತಹಿದಾ ಕ್ವಾಮಿ ಮೂವ್‌ಮೆಂಟ್‌ ಮತ್ತು ಪಾಕಿಸ್ಥಾನ್‌ ಮುಸ್ಲಿಂ ಲೀಗ್‌ ಪಕ್ಷಗಳು ವಾಪಸ್‌ ಪಡೆದಿವೆ. ನ.20ರಂದು ಐಎಸ್‌ಐ ಮುಖ್ಯಸ್ಥರಾಗಿ ನದೀಮ್‌ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆ, ವಿಪಕ್ಷಗಳು ಇಮ್ರಾನ್‌ ಸರಕಾರದ ವಿರುದ್ಧ ಅವಿಶ್ವಾಸ ಮತ ಮಂಡನೆ ಮಾಡಲಿವೆ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಇಮ್ರಾನ್‌ ಬದಲಿಗೆ ಅವರದ್ದೇ ಪಕ್ಷದ ಇಬ್ಬರನ್ನು ಪ್ರಧಾನಿಯನ್ನಾಗಿ ಮಾಡಲು ಗುರುತಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಉಗ್ರರ ಜತೆ ಸ್ನೇಹ

ಇಮ್ರಾನ್‌ ಖಾನ್‌ ಅವರ ಮತ್ತೂಂದು ತಪ್ಪು ಉಗ್ರರ ಜತೆಗೆ ಅತಿಯಾದ ಸ್ನೇಹ ಹೊಂದಿರುವುದು. ಇತ್ತೀಚೆಗಷ್ಟೇ ಪಾಕಿಸ್ಥಾನದ ಸುಪ್ರೀಂಕೋರ್ಟ್‌, ಇಮ್ರಾನ್‌ ಖಾನ್‌ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಇದಕ್ಕೆ ಕಾರಣ, ಪೇಶಾವರದ ಶಾಲೆಯೊಂದರ ಮೇಲೆ ದಾಳಿ ನಡೆಸಿ, ನೂರಾರು ಮಕ್ಕಳ ಸಾವಿಗೆ ಕಾರಣವಾಗಿದ್ದ ತೆಹ್ರಿಕ್‌ ಇ ತಾಲಿಬಾನ್‌ ಉಗ್ರ ಸಂಘಟನೆಯ ಜತೆಗೆ ಇಮ್ರಾನ್‌ ಖಾನ್‌ ಶಾಂತಿ ಒಪ್ಪಂದ ಮಾಡಿಕೊಂಡಿದ್ದು. ಅಷ್ಟೇ ಅಲ್ಲ, ವಿವಿಧ ಜೈಲುಗಳಲ್ಲಿದ್ದ ಈ ಸಂಘಟನೆಯ ನಾಯಕರನ್ನು ಬಿಡುಗಡೆ ಮಾಡಲಾಗಿತ್ತು. ಉಗ್ರ ಸಂಘಟನೆಯ ಜತೆ ಈ ರೀತಿ ಶಾಂತಿ ಒಪ್ಪಂದ ಮಾಡಿಕೊಳ್ಳುವ ಆವಶ್ಯಕತೆ ಇತ್ತೇ ಎಂದು ಪ್ರಶ್ನಿಸಿದ್ದ ಸುಪ್ರೀಂ ಕೋರ್ಟ್‌, ಅಂದು ಮಕ್ಕಳನ್ನು ಕಳೆದುಕೊಂಡಿದ್ದ ಹೆತ್ತವರಿಗೆ ಏನು ಉತ್ತರ ಹೇಳುತ್ತೀರಿ ಎಂದೂ ಪ್ರಶ್ನಿಸಿತ್ತು. ಇದರ ಜತೆಗೆ ತಾಲಿಬಾನ್‌ ನಾಯಕರ ಜತೆಗಿನ ಇಮ್ರಾನ್‌ ಖಾನ್‌ ಅವರ ಅತಿಯಾದ ಸ್ನೇಹವೂ ಪಾಕಿಸ್ಥಾನದ ಸೇನೆಯ ಕೋಪಕ್ಕೆ ಕಾರಣವಾಗಿದೆ ಎಂದು ಮೂಲಗಳು ಹೇಳಿವೆ.

ಫ‌ಯಾಜ್‌ ಹಮೀದ್‌ ತಾಲಿಬಾನ್‌ ಪ್ರೇಮಿ

ಹಾಲಿ ಐಎಸ್‌ಐ ಮುಖ್ಯಸ್ಥ ಫ‌ಯಾಜ್‌ ಹಮೀದ್‌ ಅವರು ತಾಲಿಬಾನ್‌ ಪ್ರೇಮಿ. ಇತ್ತೀಚೆಗಷ್ಟೇ ಅಫ್ಘಾನಿಸ್ಥಾನದಲ್ಲಾದ ಎಲ್ಲ ಬೆಳವಣಿಗೆಗಳ ಹಿಂದೆ ಹಮೀದ್‌ ಅವರ ಕೈವಾಡವಿತ್ತು. ಸರಕಾರ ರಚನೆಗೂ ಮುನ್ನ ಕಾಬೂಲ್‌ಗೆ ತೆರಳಿದ್ದ ಹಮೀದ್‌, ಇದರಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೇ ತಾಲಿಬಾನಿಗಳು ಮತ್ತು ಹಕ್ಕಾನಿಗಳ ನಡುವಿನ ಜಗಳಕ್ಕೂ ಸಾಕ್ಷಿಯಾಗಿದ್ದರು.ಹಮೀದ್‌ ಅವರ ತಾಲಿಬಾನ್‌ ಪ್ರೇಮ ಪಾಕಿಸ್ಥಾನದ ಸೇನೆಗೆ ಹಿಡಿಸಲಿಲ್ಲ. ಒಂದು ಕಡೆ ಇಮ್ರಾನ್‌ ಖಾನ್‌, ತಾಲಿಬಾನಿಯರ ಮೇಲೆ ಪ್ರೀತಿ ಉಳಿಸಿಕೊಂಡು, ಇಡೀ ಅಫ್ಘಾನಿಸ್ಥಾನವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂದು ಹವಣಿಸುತ್ತಿದ್ದರು. ಆದರೆ ತಾಲಿಬಾನಿಗಳ ಮೇಲಿನ ಪ್ರೀತಿಯಿಂದಾಗಿ ಜಾಗತಿಕ ಮಟ್ಟದಲ್ಲಿ ಪಾಕಿಸ್ಥಾನದ ಹೆಸರಿಗೆ ಹಾನಿಯಾಗುತ್ತದೆ ಎಂಬುದು ಪಾಕ್‌ ಸೇನೆಯ ನಿಲುವಾಗಿತ್ತು. ಹೀಗಾಗಿಯೇ ತಾಲಿಬಾನ್‌ ಮೇಲೆ ಪ್ರೀತಿ ಇರಿಸಿಕೊಂಡಿದ್ದ ಹಮೀದ್‌ರನ್ನು ತೆಗೆಯಲೇಬೇಕು ಎಂದು ಸೇನೆ ಪಣತೊಟ್ಟಿತ್ತು.


SHARE THIS

Author:

0 التعليقات: