ಸರ್ಕಾರಿ ಜಾಗದಲ್ಲಿ 'ಅಕ್ರಮವಾಗಿ ಮನೆ' ನಿರ್ಮಿಸಿಕೊಂಡವರಿಗೆ ಸಿಹಿಸುದ್ದಿ :
'ಮನೆ ಸಕ್ರಮ'ಕ್ಕೆ ಅರ್ಜಿ ಆಹ್ವಾನ
ಬೆಂಗಳೂರು: ಕಂದಾಯ ಭೂಮಿಗಳಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡವರು, ಸಕ್ರಮಕ್ಕಾಗಿ ಅರ್ಜಿ ಯಾವಾಗ ಕರೆಯುತ್ತಾರೆ ಎಂಬುದಾಗಿ ಎದುರು ನೋಡುತ್ತಿದ್ದರು. ಇದೀಗ ರಾಜ್ಯ ಸರ್ಕಾರ ಅಕ್ರಮವಾಗಿ ಕಂದಾಯ ಭೂಮಿಯಲ್ಲಿ ಮನೆ ನಿರ್ಮಾಣ ಮಾಡಿಕೊಂಡವರಿಂದ, ಸಕ್ರಮಗೊಳಿಸಲು ಅರ್ಜಿಯನ್ನು ಆಹ್ವಾನಿಸಿದೆ.
ಈ ಕುರಿತಂತೆ ಸರ್ಕಾರದ ಸೂಚನೆ ಮೇರೆಗೆ ಕಂದಾಯ ಇಲಾಖೆ ಆದೇಶ ಹೊರಡಿಸಿದ್ದು, ಬೆಂಗಳೂರು ಗ್ರಾಮಾಂತರ ಪ್ರದೇಶದ ಸರ್ಕಾರಿ ಕಂದಾಯ ಭೂಮಿಗಳಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡಿಕೊಂಡಿರುವವರು ಸಕ್ರಮಗೊಳಿಸಿಕೊಳ್ಳೋದಕ್ಕೆ, ಕಂದಾಯ ಇಲಾಖೆಯಿಂದ ಸೂಕ್ತ ನಮೂನೆಯಲ್ಲಿ ಅರ್ಜಿಯನ್ನು ಸಲ್ಲಿಸಲು ಆಹ್ವಾನಿಸಿದೆ. ಕಂದಾಯ ಭೂಮಿಗಳಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡಿಕೊಂಡವರು ಸಕ್ರಮಕ್ಕೆ ಅರ್ಜಿ ಸಲ್ಲಿಸಲು ಮಾರ್ಚ್ 31, 2022 ಕೊನೆಯ ದಿನಾಂಕವಾಗಿದೆ.
ಆದ್ದರಿಂದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ತಮ್ಮ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಚಾರ ನೀಡಿ, ಹೀಗೆ ಅಕ್ರಮವಾಗಿ ಮನೆ ನಿರ್ಮಾಣ ಮಾಡಿಕೊಂಡವರಿಂದ ನಮೂನೆ 94ಸಿಸಿಯಲ್ಲಿ ಅರ್ಜಿ ಪಡೆದು, ಅಗತ್ಯ ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆ ಸೂಚಿಸಿದೆ. ಇದೇ ಮಾದರಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಗ್ರಾಮೀಣ ಭಾಗದಲ್ಲಿಯೂ ಅರ್ಜಿ ಸಲ್ಲಿಸಲು ಅವಕಾಶ ಇದ್ದು, ಗ್ರಾಮೀಣ ಭಾಗದ ಜನರು ನಮೂನೆ 94ಸಿಸಿಯಲ್ಲಿ ಅರ್ಜಿಯನ್ನು ಸಲ್ಲಿಸಿ, ತಾವು ಅಕ್ರಮವಾಗಿ ನಿರ್ಮಿಸಿಕೊಂಡ ಮನೆಯನ್ನು ಸಕ್ರಮಗೊಳಿಸಿಕೊಳ್ಳಬಹುದಾಗಿದೆ.
0 التعليقات: