Wednesday, 17 November 2021

ವಕ್ಫ್ ಆಸ್ತಿಗಳ ಪ್ರಯೋಜನ ಸಮಾಜಕ್ಕೆ ತಲುಪಲಿ: ಸಚಿವ ಜೆ.ಸಿ.ಮಾಧುಸ್ವಾಮಿ


 ವಕ್ಫ್ ಆಸ್ತಿಗಳ ಪ್ರಯೋಜನ ಸಮಾಜಕ್ಕೆ ತಲುಪಲಿ: ಸಚಿವ ಜೆ.ಸಿ.ಮಾಧುಸ್ವಾಮಿ

ಬೆಂಗಳೂರು: ರಾಜ್ಯದಲ್ಲಿ ವಕ್ಫ್ ಬೋರ್ಡ್‍ಗೆ ಹೆಚ್ಚಿನ ಆಸ್ತಿ ಇದೆ. ಆದರೆ, ಆದಾಯ ಕಡಿಮೆ. ನಗರ ಪ್ರದೇಶದಲ್ಲಿ ಬಹುಶಃ ಇಷ್ಟೊಂದು ಆಸ್ತಿಗಳನ್ನು ಬೇರೆ ಯಾವ ಮಂಡಳಿಯೂ ಹೊಂದಿಲ್ಲ. ಇಂತಹ ಬೆಲೆ ಬಾಳುವ ಆಸ್ತಿಗಳ ಪ್ರಯೋಜನ ಸಮಾಜಕ್ಕೆ ತಲುಪಬೇಕು. ಅದಕ್ಕೆ ಪೂರಕವಾಗಿ ವಕ್ಫ್ ಬೋರ್ಡ್ ಕೈಗೊಳ್ಳುವ ಎಲ್ಲ ಪ್ರಯತ್ನಗಳಿಗೆ ಸರಕಾರ ಸಹಕಾರ ನೀಡಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಬುಧವಾರ ನಗರದ ಕನ್ನಿಂಗ್ ಹ್ಯಾಂ ರಸ್ತೆಯಲ್ಲಿರುವ ರಾಜ್ಯ ವಕ್ಫ್ ಬೋರ್ಡ್ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮೌಲಾನ ಎನ್.ಕೆ.ಎಂ.ಶಾಫಿ ಸಅದಿ ಅವರನ್ನು ಅಭಿನಂದಿಸಿದ ಬಳಿಕ ಮಾಧುಸ್ವಾಮಿ ಮಾತನಾಡಿದರು.

ರಾಜ್ಯ ವಕ್ಫ್ ಬೋರ್ಡ್‍ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಧಾರ್ಮಿಕ ಗುರು ಒಬ್ಬರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅದರಲ್ಲೂ ಬಿಜೆಪಿ ಸರಕಾರದ ಆಡಳಿತದಲ್ಲಿ. ಶಾಫಿ ಸಅದಿ ಅವರನ್ನು ಈ ಸ್ಥಾನದಲ್ಲಿ ಕೂರಿಸಲು ಸಾಕಷ್ಟು ಪರಿಶ್ರಮ ಮಾಡಿದ್ದೇವೆ. ಈಗ ಅವರು ನಿಮ್ಮ ಪ್ರತಿನಿಧಿ ಎಂದು ಅವರು ಹೇಳಿದರು.

ಶಿಕ್ಷಣಕ್ಕೆ ಪ್ರಾಧಾನ್ಯತೆ ಕೊಡದಿದ್ದರೆ ಸಮಾಜದ ಅಭಿವೃದ್ಧಿ ಸಾಧ್ಯವಿಲ್ಲ. ಶಿಕ್ಷಣ ಸಿಕ್ಕಿದರೆ ಪ್ರತಿಯೊಬ್ಬರೂ ಸ್ವಾಭಿಮಾನದ ಬದುಕು ರೂಪಿಸಿಕೊಳ್ಳಲು ಸಾಧ್ಯ. ಎಲ್ಲರ ಅಭಿವೃದ್ಧಿಯಾಗದಿದ್ದರೆ ರಾಜ್ಯದ ಅಭಿವೃದ್ಧಿಯಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಪ್ರತಿಯೊಬ್ಬರು ಸಶಕ್ತರಾಗಬೆಕು, ಸ್ವಾಭಿಮಾನದ ಜೀವನ ಸಾಗಿಸಲು ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದು ಅವರು ತಿಳಿಸಿದರು.

ವಕ್ಫ್ ಗೆ ಸಂಬಂಧಿಸಿದ ಸಮಸ್ಯೆಗಳನ್ನು ಎಲ್ಲರೂ ಬಗೆಹರಿಸುತ್ತೇವೆ ಎನ್ನುತ್ತಾರೆ. ಆದರೆ, ಬಗೆಹರಿಸಲು ಸಾಧ್ಯವಾಗುವುದಿಲ್ಲ. ಪರಸ್ಪರ ವಿಶ್ವಾಸ, ಸ್ನೇಹ ಹಾಗೂ ಸಹಕಾರದಿಂದ ಮಾತ್ರ ಸಮಸ್ಯೆಗಳು ಬಗೆಹರಿಯುತ್ತವೆ. ಅನೇಕ ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಬಹುದು. ವಿವಾದಗಳಿಂದ ಏನು ಪ್ರಯೋಜನವಿಲ್ಲ ಎಂದು ಮಾಧುಸ್ವಾಮಿ ಹೇಳಿದರು.

ಮುಜುರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಪ್ರಧಾನಿ ಹೇಳಿದಂತೆ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್’ ಎಂಬ ಮಾತನ್ನು ಗಮನದಲ್ಲಿಟ್ಟುಕೊಂಟು ನಾವು ಸೂಚಿಸಿದವರನ್ನು ಅಧ್ಯಕ್ಷರನ್ನಾಗಿ ಮಾಡಲು ತಮ್ಮ ಅಮೂಲ್ಯವಾದ ಮತ ಕೊಟ್ಟು ಎಲ್ಲ ಸದಸ್ಯರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ‘ನವ ಕರ್ನಾಟಕ’ ಎಂದು ಹೊಸ ಹೆಜ್ಜೆ ಇಡುತ್ತಿದೆ. ನನಗೆ ಕೊಟ್ಟಿರುವ ಮುಜುರಾಯಿ, ಹಜ್ ಹಗೂ ವಕ್ಫ್ ಇಲಾಖೆ ಮುಖಾಂತರ ಇವತ್ತು ಬಹಳಷ್ಟು ಸಂತೋಷ ಹಾಗೂ ರಾಜ್ಯದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ಕ್ಷಣ ಇದಾಗಿದೆ. ನಮ್ಮ ಸರಕಾರದಿಂದ ನಾಮನಿರ್ದೇಶನಗೊಂಡ ವ್ಯಕ್ತಿ ಅಧ್ಯಕ್ಷರಾಗಲು ಬಹಳಷ್ಟು ಅಡೆತಡೆಗಳು ಇದ್ದವು. ಕಾನೂನು ಸಚಿವ ಮಾಧುಸ್ವಾಮಿ ಸತತ ಎರಡು ತಿಂಗಳುಗಳ ಕಾಲ ಹಗಲು ರಾತ್ರಿ ಶ್ರಮಿಸಿ, ಈ ಕಾರ್ಯ ಸುಸೂತ್ರವಾಗಿ ನಡೆಯಲು ಪ್ರಯತ್ನಿಸಿದ್ದಾರೆ ಎಂದು ಶಶಿಕಲಾ ಜೊಲ್ಲೆ ಹೇಳಿದರು.

ಸಮಾಜದ ಬಗ್ಗೆ ಕಳಕಳಿ ಇಟ್ಟುಕೊಂಡಿರುವ ಶಾಫಿ ಸಅದಿ, ಸಮಾಜದ ಏಳಿಗೆ, ವಕ್ಫ್ ಆಸ್ತಿಗಳ ಸಂರಕ್ಷಣೆ, ಅಭಿವೃದ್ಧಿ ವಿಚಾರವನ್ನು ನಮ್ಮ ಗಮನಕ್ಕೆ ತಂದಿದ್ದಾರೆ. ಸಮಾಜದ ಏಳಿಗೆಗಾಗಿ ವಕ್ಫ್ ಆಸ್ತಿಗಳ ಅಭಿವೃದ್ಧಿ, ಚಾಲ್ತಿಯಲ್ಲಿರುವ ಸಂಸ್ಥೆಗಳ ಉನ್ನತೀಕರಣ, ಮಕ್ಕಳು, ಮಹಿಳೆಯರಿಗೆ ಯಾವ ರೀತಿ ಸಹಾಯ ನಿಡಲು ಸಾಧ್ಯ ಅದನ್ನು ಮಾಡುತ್ತೇವೆ ಎಂದು ಅವರು ಭರವಸೆ ನೀಡಿದರು. 

ವಕ್ಫ್ ಬೋರ್ಡ್ ಕೇಂದ್ರ ಕಚೇರಿಯನ್ನು ಅಭಿವೃದ್ಧಿಪಡಿಸಲಾಗುವುದು. ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಬರುವ ಅನುದಾನವನ್ನು ವಕ್ಫ್ ಬೋರ್ಡ್ ಮೂಲಕ ಸಮರ್ಪಕವಾಗಿ ಅನುಷ್ಠಾನ ಮಾಡುವ ಮೂಲಕ ಇಡೀ ರಾಜ್ಯಕ್ಕೆ ಒಳ್ಳೆಯ ಸಂದೇಶ ರವಾನಿಸಲಾಗುವುದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ರವಿಕುಮಾರ್, ರಾಜ್ಯ ವಕ್ಫ್ ಬೋರ್ಡ್ ಸದಸ್ಯರಾದ ಆರ್.ಅಬ್ದುಲ್ ರಿಯಾಝ್ ಖಾನ್, ಜಿ.ಯಾಕೂಬ್, ಮೀರ್ ಅಝರ್ ಹುಸೇನ್, ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ರಾಜ್ಯಾಧ್ಯಕ್ಷ ಮುಝಮ್ಮಿಲ್ ಅಹ್ಮದ್ ಬಾಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


SHARE THIS

Author:

0 التعليقات: