ವಿಧಾನ ಪರಿಷತ್ ಚುನಾವಣೆ: ಸ್ಪರ್ಧಾ ಕಣದಿಂದ ಹಿಂದಕ್ಕೆ ಸರಿದ ಡಾ. ಎಂ.ಎನ್. ರಾಜೇಂದ್ರ ಕುಮಾರ್
ಮಂಗಳೂರು: ರಾಜ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆ ಸ್ಪರ್ಧಿಸುವುದಾಗಿ ಘೋಷಿಸಿದ್ದ ಸಹಕಾರಿ ರಂಗದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಇಂದು ಘೋಷಿಸಿದ್ದಾರೆ.
ಕಳೆದ 35 ವರ್ಷಗಳಿಂದ ಸಹಕಾರ ರಂಗದಲ್ಲಿದ್ದೇನೆ. ರಾಜಕೀಯ ಬೇಡ, ಸಹಕಾರಿ ಕ್ಷೇತ್ರಕ್ಕೂ ರಾಜಕೀಯ ತರುವುದಿಲ್ಲ ಎಂದು ಈ ಹಿಂದೆಯೇ ಹೇಳಿದ್ದೆ. ಸಹಕಾರಿ ಕ್ಷೇತ್ರ ಪವಿತ್ರವಾಗಿದ್ದು, ನಾನು ಸ್ಪರ್ಧಿಸಿದರೆ ಅದಕ್ಕೆ ರಾಜಕೀಯ ಬಣ್ಣ ಬರಲಿದೆ. ಯಾವುದೇ ಪಕ್ಷದಲ್ಲಿ ಗುರುತಿಸಿಕೊಳ್ಳಬೇಕಾದ ಅನಿವಾರ್ಯತೆಯೂ ಎದುರಾಗಬಹುದು. ಹಾಗಾಗಿ ಡಿಸೆಂಬರ್ 10ರಂದು ನಡೆಯಲಿರುವ ಚುನಾವಣೆಯಲ್ಲಿ ಪಕ್ಷೇತರನಾಗಿಯೂ ಸ್ಪರ್ಧಿಸುವುದಿಲ್ಲ ಎಂದು ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಹೇಳಿದರು.
ಸಹಕಾರಿ ಸಚಿವ ಸೋಮಶೇಖರ್ ಅವರ ಹೇಳಿಕೆಯ ಕುರಿತಂತೆ ಪ್ರತಿಕ್ರಿಯಿಸಿದ ಡಾ.ಎಂ.ಎನ್. ರಾಜೇಂದ್ರ ಕುಮಾರ್, ರಾಜಕೀಯ ವೇದಿಕೆಯಲ್ಲಿ ಅವರು ಮಾತಾಡಿದ್ದಾರೆ. ನಾವಿಬ್ಬರು ಸ್ನೇಹಿತರು. ಯಾವುದೋ ಒತ್ತಡದಿಂದ ಅವರು ಮಾತನಾಡಿರಬಹುದು. ಸಾಕಷ್ಟು ಪ್ರಶಸ್ತಿಗಳು ಸಹಕಾರ ಕ್ಷೇತ್ರಕ್ಕೆ ಬಂದಿರುವಾಗ ಅವ್ಯವಹಾರದ ಪ್ರಶ್ನೆ ಎಲ್ಲಿಂದ ಎಂದು ಅವರು ಪ್ರಶ್ನಿಸಿದರು.
ಸಹಕಾರಿ ಕ್ಷೇತ್ರ ನನಗೆ ಇಷ್ಟೊಂದು ಸ್ಥಾನ ಮಾನ ನೀಡಿದೆ. ಹಾಗಾಗಿ ಮುಂದೆಯೂ ನಾನು ರಾಜಕೀಯ ಸ್ಪರ್ಧೆಗೆ ಹೋಗಲಾರೆ. ನಾನು ತಟಸ್ಥನಾಗಿದ್ದು ಮುಂದುವರಿಯಲಿದ್ದೇನೆ. ಹಾಗಿದ್ದರೂ ನಾನು ಒಳ್ಳೆಯ ಕೆಲಸ ಮಾಡುವವರಿಗೆ ಸದಾ ಬೆಂಬಲವನ್ನು ನೀಡಲಿದ್ದೇನೆ ಎಂದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಫರ್ಧಿಸುವ ಉದ್ದೇಶದಿಂದ ಇತ್ತೀಚೆಗೆ ಪ್ರಚಾರಕ್ಕಾಗಿ ಚುನಾವಣಾ ಕಾರ್ಯಾಲಯವನ್ನೂ ಉದ್ಘಾಟಿಸಿದ್ದರು.
0 التعليقات: