ಕುವೆಂಪು ಪತ್ರಗಳು ಕೃತಿ ಬಳಕೆ ಮಾಡದಂತೆ ನೀಡಿದ್ದ ತಡೆಯಾಜ್ಞೆ ಮುಂದೂಡಿಕೆಗೆ ಹೈಕೋರ್ಟ್ ನಕಾರ

ಬೆಂಗಳೂರು: ಸಾಹಿತಿ ಹರಿಹರ ಪ್ರಿಯ ಅವರ ‘ಕುವೆಂಪು ಪತ್ರಗಳು’ ಕೃತಿಯನ್ನು ಬಳಕೆ ಮಾಡದಂತೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ನೀಡಿದ್ದ ತಡೆಯಾಜ್ಞೆ ಮುಂದುವರಿಕೆಗೆ ಹೈಕೋರ್ಟ್ ನಿರಾಕರಿಸಿದೆ.
ಹಂಪಿ ಕನ್ನಡ ವಿವಿ ಹಾಗೂ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಕೆ.ಎಸ್.ಮುದುಗಲ್ ಅವರಿದ್ದ ನ್ಯಾಯಪೀಠದಲ್ಲಿ ನಡೆಯಿತು. ಕುವೆಂಪು ಪತ್ರಗಳು ಕೃತಿಯನ್ನು ಬಳಕೆ ಮಾಡದಂತೆ ಸಿಟಿ ಸಿವಿಲ್ ಕೋರ್ಟ್ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಮಧ್ಯಂತರ ತಡೆ ನೀಡಿತ್ತು.
ಈ ತಡೆ ತೆರವು ಕೋರಿ ಹಂಪಿ ಕನ್ನಡ ವಿವಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ಪುರಸ್ಕರಿಸಿದ್ದ ನ್ಯಾಯಪೀಠವು ಸಿಟಿ ಸಿವಿಲ್ ಕೋರ್ಟ್ ಆದೇಶಕ್ಕೆ ತಡೆ ನೀಡಿತ್ತು. ಆದರೆ, ಬುಧವಾರ ಈ ತಡೆ ಮುಂದುವರಿಕೆಗೆ ನಿರಾಕರಿಸಿ ಆದೇಶಿಸಿದೆ. ಸಾಹಿತಿ ಹರಿಹರ ಪ್ರಿಯ ಅವರ ಪರವಾಗಿ ಎಚ್.ಎಸ್.ವಿವೇಕಾನಂದ ಅವರು ಹಾಜರಿದ್ದರು.
ಪ್ರಕರಣವೇನು: ಕುವೆಂಪು ಬದುಕು, ಸಾಹಿತ್ಯದ ಕುರಿತು ಅಧ್ಯಯನ ನಡೆಸಿರುವ ಹಿರಿಯ ಸಾಹಿತಿ ಹರಿಹರ ಪ್ರಿಯ, ಕುವೆಂಪು ಅವರು ತಮ್ಮ ಸಮಕಾಲೀನರಿಗೆ ಬರೆದಿದ್ದ 62 ಪತ್ರಗಳನ್ನು ಸಂಗ್ರಹಿಸಿ 1974ರಲ್ಲಿ ‘ಕುವೆಂಪು ಪತ್ರಗಳು’ ಕೃತಿ ರಚಿಸಿದ್ದರು. ಈ ಕೃತಿಯನ್ನು ಹಂಪಿ ಕನ್ನಡ ವಿವಿ ‘ಕುವೆಂಪು ಸಾಹಿತ್ಯ ಸರಣಿ’ ಪುಸ್ತಕದ 12ನೇ ಸಂಪುಟದಲ್ಲಿ ಯಥಾವತ್ತಾಗಿ ನಕಲು ಮಾಡಿದೆ ಎಂಬುದು ಸಾಹಿತಿಯ ಆರೋಪ. ಈ ಸಂಬಂಧ ವಿವಿಗೆ ನೋಟಿಸ್ ಜಾರಿ ಮಾಡಿದ್ದರೂ, ಉತ್ತರ ಬಾರದ ಹಿನ್ನೆಲೆಯಲ್ಲಿ ಹರಿಹರ ಪ್ರಿಯ ನಗರದ 18ನೆ ಹೆಚ್ಚುವರಿ ಸಿಟಿ ಸಿವಿಲ್ ಕೋರ್ಟ್ನಲ್ಲಿ ದಾವೆ ಹೂಡಿದ್ದರು.
ಈ ಹಿನ್ನೆಲೆಯಲ್ಲಿ ಸಿಟಿ ಸಿವಿಲ್ ಕೋರ್ಟ್, `ಕುವೆಂಪು ಪತ್ರಗಳು’ ಕೃತಿಯನ್ನು ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಸಂಶೋಧನಾ ಉದ್ದೇಶಗಳಿಗೆ ಹೊರತುಪಡಿಸಿ, ಬೇರಾವುದೇ ರೀತಿಯಲ್ಲಿ ಬಳಕೆ ಮಾಡದಂತೆ, ಪ್ರಕಟಿಸದಂತೆ, ಮಾರಾಟ ಮಾಡದಂತೆ ವಿವಿಗೆ ಸೂಚಿಸಿ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಹಂಪಿ ಕನ್ನಡ ವಿವಿ ಹೈಕೋರ್ಟ್ ಮೆಟ್ಟಿಲೇರಿತ್ತು.
0 التعليقات: