Monday, 1 November 2021

​ರಾಷ್ಟ್ರ ರಾಜಧಾನಿಯಲ್ಲಿ ಕನಿಷ್ಠ ತಾಪಮಾನ ದಾಖಲು


ರಾಷ್ಟ್ರ ರಾಜಧಾನಿಯಲ್ಲಿ ಕನಿಷ್ಠ ತಾಪಮಾನ ದಾಖಲು

ಹೊಸದಿಲ್ಲಿ,: ರಾಷ್ಟ್ರ ರಾಜಧಾನಿಯಲ್ಲಿ ಪ್ರಸಕ್ತ ಋತುವಿನ ಕನಿಷ್ಠ ತಾಪಮಾನ 13.6 ಡಿಗ್ರಿ ಸೆಲ್ಸಿಯಸ್ ಸೋಮವಾರ ರಾತ್ರಿ ದಾಖಲಾಗಿದೆ. ಆದಾಗ್ಯೂ ಪೂರ್ವಾಭಿಮುಖ ಗಾಳಿಯಿಂದಾಗಿ ಸೋಮವಾರ ತಾಪಮಾನ ಅಲ್ಪ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಇದಕ್ಕೂ ಮುನ್ನ ಅಕ್ಟೋಬರ್ 29ರಂದು ಪ್ರಸಕ್ತ ಋತುವಿನ ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ಸಫ್ದರ್‌ಜಂಗ್‌ನಲ್ಲಿ ದಾಖಲಾಗಿತ್ತು. ಆದರೆ ಕನಿಷ್ಠ ತಾಪಮಾನ 13. 6 ಡಿಗ್ರಿ ಸಫ್ದರ್‌ಜಂಗ್‌ನಲ್ಲಿ ದಾಖಲಾಗಿದೆ. ಇದೇ ಪ್ರದೇಶದಲ್ಲಿ ಗರಿಷ್ಠ ಉಷ್ಣಾಂಶ 31.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ವಾಡಿಕೆಗಿಂತ ಒಂದು ಡಿಗ್ರಿ ಅಧಿಕ.

"ಶುಭ್ರ ಆಕಾಶ ಮತ್ತು ಮಾಲಿನ್ಯ ಅಲ್ಪಮಟ್ಟಿಗೆ ಕಡಿಮೆಯಾಗಿರುವ ಮತ್ತು ಸ್ಥಳೀಯ ವಿಕಿರಣಾತ್ಮಕ ಶೀತ ವ್ಯವಸ್ಥೆಯ ಕಾರಣದಿಂದ ಸೋಮವಾರ ಸಫ್ದರ್‌ಜಂಗ್‌ನಲ್ಲಿ 13.6 ಡಿಗ್ರಿ ಕನಿಷ್ಠ ತಾಪಮಾನ ದಾಖಲಾಗಿದೆ. ಆದಾಗ್ಯೂ ಗಾಳಿಯ ಗತಿ ಪೂರ್ವಾಭಿಮುಖವಾಗಿ ಬದಲಾಗಿದ್ದು, ಕನಿಷ್ಠ ತಾಪಮಾನ ಮಂಗಳವಾರ ಅಲ್ಪಮಟ್ಟಿಗೆ ಹೆಚ್ಚಲಿದೆ" ಎಂದು ಹವಾಮಾನ ಇಲಾಖೆಯ ವಿಜ್ಞಾನಿ ಆರ್.ಕೆ.ಜೆನಮಣಿ ಹೇಳಿದ್ದಾರೆ.

ಐಎಂಡಿ ಮುನ್ಸೂಚನೆ ಪ್ರಕಾರ ಮಂಗಳವಾರ ಹಾಗೂ ಬುಧವಾರ ಕನಿಷ್ಠ ತಾಪಮಾನ 15 ಡಿಗ್ರಿಯ ಆಸುಪಾಸಿನಲ್ಲಿ ಇರಲಿದೆ. ಗುರುವಾರ ಅಲ್ಪ ಇಳಿಕೆಯಾಗುವ ನಿರೀಕ್ಷೆ ಇದೆ. "ಪಶ್ಚಿಮ ಪ್ರಕ್ಷುಬ್ಧತೆ ನವೆಂಬರ್ 1ರಿಂದ 4ರವರೆಗೆ ಪರಿಣಾಮ ಬೀರಲಿದೆ. ದಿಲ್ಲಿಯಲ್ಲಿ ಗಾಳಿಯ ದಿಕ್ಕು ಬದಲಾಗಿದ್ದು, ಬೆಟ್ಟ ಪ್ರದೇಶಗಳಲ್ಲಿ ಅಲ್ಪ ಮಳೆಯಾಗುವ ನಿರೀಕ್ಷೆ ಇದೆ. ಆದಾಗ್ಯೂ ತಾಪಮಾನ ಇಳಿಕೆಯಾಗುವ ಸಾಧ್ಯತೆ ಕಡಿಮೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಗಾಳಿಯ ದಿಕ್ಕು ಪೂರ್ವದಿಂದ ವಾಯವ್ಯಕ್ಕೆ ಬದಲಾಗುವ ಕಾರಣದಿಂದ ನವೆಂಬರ್ 5 ಮತ್ತು 6ರಂದು ಮತ್ತೆ ತಾಪಮಾನ 13 ಡಿಗ್ರಿಗೆ ಕುಸಿಯುವ ಅಪಾಯವಿದೆ ಎಂದು ವಿವರಿಸಿದ್ದಾರೆ. 2020ರ ನವೆಂಬರ್‌ನಲ್ಲಿ ಕನಿಷ್ಠ ತಾಪಮಾನ 6.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.



SHARE THIS

Author:

0 التعليقات: