ಅತ್ಯಾಚಾರ ಪ್ರಕರಣ; ಬಂಧಿತ ಆರೋಪಿ ನಾರಾಯಣ ರೈ ಜಾಮೀನು ಅರ್ಜಿ ತಿರಸ್ಕೃತ

ಪುತ್ತೂರು: ಬಡಗನ್ನೂರಿನ 17ರ ಹರೆಯದ ದಲಿತ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿಯ ಜಾಮೀನು ಅರ್ಜಿಯನ್ನು ಪುತ್ತೂರಿನ 5ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತಿರಸ್ಕರಿಸಿದೆ.
ಪುತ್ತೂರು ತಾಲೂಕಿನ ಪಡವನ್ನೂರು ಗ್ರಾಮದ ನಿವಾಸಿ ಆರೆಸ್ಸೆಸ್ಸ್ ಮತ್ತು ಬಿಜೆಪಿ ಮುಖಂಡ ಕುದ್ಕಾಡಿ ನಾರಾಯಣ ರೈ (73) ಜಾಮೀನು ತಿರಸ್ಕೃತಗೊಂಡ ಆರೋಪಿ.
ಅರೋಪಿಯು ನ .27ರಂದು ತನ್ನ ವಕೀಲರ ಜತೆ ಪುತ್ತೂರಿನ ನ್ಯಾಯಾಲಯಕ್ಕೆ ಆಗಮಿಸಿ ನ್ಯಾಯಪೀಠದ ಮುಂದೆ ಶರಣಾರಾಗಿದ್ದು, ಅಂದು ಆತ ಸಲ್ಲಿಸಿದ ಮಧ್ಯಾಂತರ ಜಾಮೀನು ಅರ್ಜಿ ವಜಾಗೊಳಿಸಿದ ನ್ಯಾಯಾಲಯವು ಆರೋಪಿಯನ್ನು ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಕೊಟ್ಟಿತ್ತು.
ಈ ಹಿನ್ನೆಲೆಯಲ್ಲಿ ಆತ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು ಇದರ ವಿಚಾರಣೆ ನಡೆಸಿದ ಪುತ್ತೂರಿನ 5ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವೂ ಈ ಅರ್ಜಿಯನ್ನು ನ. 2ರಂದು ತಿರಸ್ಕರಿಸಿದೆ. ಹೀಗಾಗಿ ಆತನ ಬಂಧನ ಇನ್ನಷ್ಟು ಕಾಲ ಮುಂದುವರಿಯಲಿದೆ.
ಆರೋಪಿಯಿಂದ ಅತ್ಯಾಚಾರಕ್ಕೆ ಒಳಗಾಗಿದ್ದ ಸಂತ್ರಸ್ತ ಬಾಲಕಿ ಸೆ .5 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದು ಈ ಬಗ್ಗೆ ಪೊಕ್ಸೋ ಕಾಯ್ದೆಯಡಿ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಲೆಮರೆಸಿಕೊಂಡಿದ್ದ ಆರೋಪಿ ನಾರಾಯಣ ರೈ ವಕೀಲರ ಮೂಲಕ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ. ಏತನ್ಮಧ್ಯೆ ಆತನ ಬಂಧನಕ್ಕೆ ಒತ್ತಾಯಿಸಿ ದಲಿತ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದವು. ಕಾಂಗ್ರೆಸ್ ಕೂಡ ಆತನ ಬಂಧನಕ್ಕೆ ಅಗ್ರಹಿಸಿತ್ತು.
ಎರಡು ವಾರಗಳ ಹಿಂದೆ ನಾರಾಯಣ ರೈ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯೂ ವಜಾಗೊಂಡಿತ್ತು. ಇದೀಗ ಮತ್ತೊಮ್ಮೆ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
0 التعليقات: