Friday, 12 November 2021

ಹ್ಯಾಕರ್ ಶ್ರೀಕಿಯ ಡ್ರಗ್ ಸೇವನೆಯ ವರದಿ ನೆಗೆಟಿವ್

 

ಹ್ಯಾಕರ್ ಶ್ರೀಕಿಯ ಡ್ರಗ್ ಸೇವನೆಯ ವರದಿ ನೆಗೆಟಿವ್

ಬೆಂಗಳೂರು: ಬಿಟ್‍ಕಾಯಿನ್ ಹಾಗೂ ಡ್ರಗ್ ಪ್ರಕರಣದ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯ ಡ್ರಗ್ಸ್ ಸೇವನೆ ಪರೀಕ್ಷೆಯಲ್ಲಿ ವರದಿಯು ಶುಕ್ರವಾರ ಬಂದಿದ್ದು, ವರದಿಯಲ್ಲಿ ನೆಗೆಟಿವ್ ಎಂದು ಬಂದಿದೆ. ಸಿಸಿಬಿ ಕೋರ್ಟ್ ಆದೇಶದಂತೆ ಮಡಿವಾಳದ ಎಫ್‍ಎಸ್‍ಎಲ್‍ನಲ್ಲಿ ಯೂರಿನ್ ಹಾಗೂ ಬ್ಲಡ್ ಸ್ಯಾಂಪಲ್‍ಗಳ ಮುಖಾಂತರ ಶ್ರೀಕಿ ಡ್ರಗ್ ಸೇವನೆಯ ಕುರಿತು ಪರೀಕ್ಷೆ ಮಾಡಲಾಯಿತು. 

ನ. 7 ರಂದು ಬೆಂಗಳೂರಿನ ಹೊಟೇಲ್ ಒಂದರಲ್ಲಿ ವಿಷ್ಣು ಭಟ್ ಹಾಗೂ ಡ್ರಗ್ ಮತ್ತು ಬಿಟ್‍ಕಾಯಿನ್ ಪ್ರಕರಣದ ಆರೋಪಿಯಾಗಿದ್ದ ಶ್ರೀಕೃಷ್ಣನ ವೈದ್ಯಕೀಯ ಪರೀಕ್ಷೆಯಲ್ಲಿ ಇಬ್ಬರೂ ಮಾದಕ ವಸ್ತು ಸೇವಿಸಿರುವುದು ದೃಢವಾಗಿದೆ. ಮಾದಕ ವಸ್ತು ಸೇವನೆ ದೃಢವಾದ ಹಿನ್ನೆಲೆಯಲ್ಲಿ ಇಂದಿರಾನಗರದಲ್ಲಿರುವ ವಿಷ್ಣು ಭಟ್ ಮನೆಯಲ್ಲಿ ಪೊಲೀಸರ ಶೋಧಕಾರ್ಯ ನಡೆಸಿದ್ದರು.

ಈ ವೇಳೆ, ವಿಷ್ಣು ಭಟ್ ಮನೆಯಲ್ಲಿ ಗಾಂಜಾ ಬೆರೆಸಿದ ಸಿಗರೇಟ್ ಪತ್ತೆ ಆಗಿತ್ತು. ಹಾಗಾಗಿ ಹ್ಯಾಕರ್ ಶ್ರೀಕೃಷ್ಣ ಹಾಗೂ ವಿಷ್ಣು ಭಟ್ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು. ಎನ್‍ಡಿಪಿಎಸ್ ಕಾಯ್ದೆಯಡಿ ಪೊಲೀಸರು ಕೇಸ್ ದಾಖಲಿಸಿದ್ದರು. 

ಹೊಟೇಲ್‍ನಲ್ಲಿ ವಿಷ್ಣು ಭಟ್ ಹಾಗೂ ಶ್ರೀಕೃಷ್ಣನ ಪುಂಡಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಷ್ಣು ಭಟ್ ಹಾಗೂ ಶ್ರೀಕೃಷ್ಣ ಮಾದಕ ವಸ್ತು ಸೇವಿಸಿರುವುದು ದೃಢವಾಗಿದೆ. ವೈದ್ಯಕೀಯ ತಪಾಸಣೆ ವೇಳೆ ಮಾದಕ ವಸ್ತು ಸೇವನೆ ದೃಢವಾಗಿದೆ. ಇದರ ಬೆನ್ನಲ್ಲೇ ವಿಷ್ಣು ಭಟ್ ಮನೆಯಲ್ಲಿ ಪರಿಶೀಲನೆ ನಡೆಸಿದ್ದೆವು. ವಿಷ್ಣು ಭಟ್ ಮನೆಯಲ್ಲಿ ಗಾಂಜಾ, ಮಾದಕ ವಸ್ತು ಸಿಕ್ಕಿದೆ. ಪತ್ತೆಯಾದ ವಸ್ತುವನ್ನು ವಶಪಡಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸುತ್ತೇವೆ ಎಂದು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಡಾ. ಶರಣಪ್ಪ ಹೇಳಿಕೆ ನೀಡಿದ್ದರು.


SHARE THIS

Author:

0 التعليقات: