Thursday, 18 November 2021

ಸುನ್ನೀ ಉಲಮಾ ಕೋಟಾದಡಿ ಆಯ್ಕೆಯಾಗಿದ್ದೇನೆ- ವಕ್ಫ್ ಅಧ್ಯಕ್ಷ ಮೌಲಾನಾ ಶಾಫಿ ಸಅದಿ


 ಸುನ್ನೀ ಉಲಮಾ ಕೋಟಾದಡಿ ಆಯ್ಕೆಯಾಗಿದ್ದೇನೆ- ವಕ್ಫ್ ಅಧ್ಯಕ್ಷ ಮೌಲಾನಾ ಶಾಫಿ ಸಅದಿ

ಓರ್ವ ಧಾರ್ಮಿಕ ಪ್ರಚಾರಕನಾದ ನಾನು, ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಿಲ್ಲ

ಬೆಂಗಳೂರು: ಕರ್ನಾಟಕ ರಾಜ್ಯ ವಖ್ಫ್ ಬೋರ್ಡ್‌ನ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎನ್ ಕೆ ಎಂ ಶಾಫಿ ಸಅದಿಯವರು ಬಹುಮತದೊಂದಿಗೆ ಆಯ್ಕೆ ಗೊಂಡಿದ್ದು, ಶಾಫಿ ಸಅದಿಯವರ ಗೆಲುವಿನಲ್ಲಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಸಾಮಾಜಿಕ ತಾಣ ಸಹಿತ ಹಲವರಿಂದ ಅಭಿನಂದನೆಯ ಮಹಾಪೂರವೇ ಹರಿದು ಬಂದಿದೆ.

ಆದರೆ, ಅವರ ಗೆಲುವನ್ನು ಅರಗಿಸಲಾಗದ ಕೆಲವರು ಸಾಮಾಜಿಕ ತಾಣದಲ್ಲಿ ಶಾಫಿ ಸಅದಿಯವರಿಗೆ ರಾಜಕೀಯ ನಂಟನ್ನು ಸ್ಥಾಪಿಸಲು ಹರಸಾಹಸ ಪಡುತ್ತಿರುವುದು ಖೇದಕರ.

ಈ ಬಗ್ಗೆ ಖಾಸಗಿ ಚಾನಲೊಂದಕ್ಕೆ ನೀಡಿದ ಚುಟುಕು ಸಂದರ್ಶನವೊಂದರಲ್ಲಿ ಶಾಫಿ ಸಅದಿಯವರು ತಮ್ಮ ಆಯ್ಕೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ತಾವು ಯಾವ ಪಕ್ಷದ ಅಭ್ಯರ್ಥಿ ಎಂಬ ನಿರೂಪಕನ ಪ್ರಶ್ನೆಗೆ ಉತ್ತರಿಸುತ್ತಾ, “ವಕ್ಫ್ ಸದಸ್ಯನ ಆಯ್ಕೆ ಯಾವುದೇ ರಾಜಕೀಯ ಪಕ್ಷಾಧರಿತ ನಡೆಯುವುದಿಲ್ಲ, ಹೊರತು ಕೋಟಾ ಆಧಾರಿತವಾಗಿದೆ. ನಾನು ಸುನ್ನೀ ಉಲಮಾ ಕೋಟಾದಡಿ ಆಯ್ಕೆ ಗೊಂಡಿದ್ದೇನೆ. ಪ್ರತೀ ಸದಸ್ಯರು ಒಂದೊಂದು ಕೋಟಾದಡಿ ಆಯ್ಕೆಗೊಂಡವರಾಗಿದ್ದಾರೆ”

“ನನ್ನನ್ನು ಬಿಜೆಪಿ, ಕಾಂಗ್ರೆಸ್ ಮತ್ತೆ ಕೆಲವರು ಜೆಡಿಎಸ್ ಎಂದೂ ಹಲವರು ಹಲವು ರೀತಿ ಬಣ್ಣಿಸುತ್ತಾರೆ. ಆದರೆ, ಓರ್ವ ಧಾರ್ಮಿಕ ಪ್ರಚಾರಕನಾದ ನಾನು, ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಿಲ್ಲ. ಅದೇ ರೀತಿ ಅವುಗಳನ್ನು ಬೆಂಬಲಿಸುವುದು ಮತ್ತು ವಿರೋಧಿಸುವುದು ಮೌಲಾನಾ ಎಂಬ ನೆಲೆಯಲ್ಲಿ ಸೂಕ್ತವಲ್ಲ”

“ಆಡಳಿತ ಪಕ್ಷ ಬಿಜೆಪಿಯಿಂದ ಸಂಪೂರ್ಣ ಬೆಂಬಲವಿದೆ.ತಮ್ಮ ಸಮಾಜದ ಕಲ್ಯಾಣಕ್ಕಾಗಿ ಕಾರ್ಯಾಚರಿಸಿ, ವಕ್ಫ್ ಬೋರ್ಡಿನಲ್ಲಿ ಉಪಯೋಗ ಶೂನ್ಯವಾಗಿರುವ ಕಾನೂನುಗಳನ್ನು ಕಾರ್ಯರೂಪಕ್ಕೆ ತಂದು, ಸಮಾಜದ ಏಳಿಗೆಗಾಗಿ ಕಾರ್ಯಾಚರಿಸಿ ಎಂದಷ್ಟೇ ಆಡಳಿತ ಪಕ್ಷ ಮತ್ತು ಮಂತ್ರಿಯವರು ಹೇಳಿದ್ದಾರೆ. ಆದ್ದರಿಂದ ಆಡಳಿತ ಪಕ್ಷಕ್ಕೆ ನನ್ನ ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ಶಾಫಿ ಸಅದಿ ಹೇಳಿದರು.

ಶಾಫಿ ಸಅದಿಯವರು ಕರ್ನಾಟಕ ರಾಜ್ಯ ಸರಕಾರದಿಂದ ಕಳೆದ ಎರಡು ಅವಧಿಗೆ ರಾಜ್ಯ ವಕ್ಫ್ ಬೋರ್ಡ್ ಸದಸ್ಯರಾಗಿ ನಾಮ ನಿರ್ದೇಶನಗೊಂಡಿದ್ದರು.

ಸದ್ಯ ಕರ್ನಾಟಕ ಮುಸ್ಲಿಮ್ ಜಮಾಅತ್ ಇದರ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.

ಉಲಮಾ(ಮೌಲಾನ) ಒಬ್ಬರು ಕರ್ನಾಟಕ ರಾಜ್ಯ ವಕ್ಫ್‌ ಬೋರ್ಡ್‌ ಅಧ್ಯಕ್ಷರಾಗಿ ಇದೇ ಮೊದಲ ಬಾರಿಗೆ ಆಯ್ಕೆಯಾಗಿದ್ದು, ಕರಾವಳಿಗೂ ಇದು ಮೊದಲ ಆಯ್ಕೆಯಾಗಿದೆ.

ವಕ್ಫ್ ಮಂಡಳಿ ಅದ್ಯಕ್ಷರಾಗಿದ್ದ ಮುಹಮ್ಮದ್ ಯೂಸುಫ್ ಅವರ ನಿಧನದ ಬಳಿಕ ತೆರವಾಗಿದ್ದ ಅದ್ಯಕ್ಷ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿತ್ತು.


SHARE THIS

Author:

0 التعليقات: