ಕೇರಳದಲ್ಲಿ ಭಾರೀ ಮಳೆ
ತಿರುವನಂತಪುರ: ಕೇರಳದಲ್ಲಿ ಸೋಮವಾರ ಕೂಡ ಮಳೆ ಮುಂದುವರಿದಿದೆ. ತಿರುವನಂತಪುರ, ಕೊಲ್ಲಂ ಹಾಗೂ ಕೊಟ್ಟಾಯಂ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಮಳೆ ಸಂಬಂಧಿ ದುರಂತಗಳಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಹಲವೆಡೆ ಸೊತ್ತುಗಳಿಗೆ ಹಾನಿ ಉಂಟಾಗಿದೆ.
ಭಾರತ ಹವಾಮಾನ ಇಲಾಖೆ ಕೇರಳದ ಎರ್ನಾಕುಳಂ, ಇಡುಕ್ಕಿ, ತ್ರಿಶೂರು, ಕೋಝಿಕ್ಕೋಡ್, ಕಣ್ಣೂರು ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಸೋಮವಾರ ಆರೆಂಜ್ ಅಲರ್ಟ್ ಘೋಷಿಸಿತ್ತು. ಕೊಲ್ಲಂ, ಕೊಟ್ಟಾಯಂ, ತಿರುವನಂತಪುರ, ಇಡುಕ್ಕಿ ಹಾಗೂ ತ್ರಿಶೂರು ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳಲ್ಲಿ ಸುರಿದ ಮಳೆಯಿಂದ ತೀವ್ರ ಹಾನಿ ಉಂಟಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಹಿತಿ ನೀಡಿದೆ. ರಾಜ್ಯಾದ್ಯಂತ ಮಳೆ ಸಂಬಂಧಿಸಿದ ಹಲವು ದುರಂತಗಳು ಸಂಭವಿಸಿವೆ. ಒಂದು ಮನೆ ಸಂಪೂರ್ಣವಾಗಿ ನಾಶವಾಗಿದೆ.
28 ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದೆ. ಕಳೆದ 24 ಗಂಟೆಗಳಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದೆ. ಕಣ್ಣೂರು ಹಾಗೂ ತ್ರಿಶೂರು ಜಿಲ್ಲೆಗಳಲ್ಲಿ ರವಿವಾರ ಸಂಭವಿಸಿದ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಎರ್ನಾಕುಳಂ ಜಿಲ್ಲೆಯಲ್ಲಿ ಗುಡ್ಡೆ ಕುಸಿತ ಸಂಭವಿಸಿ ಓರ್ವ ಚಾಲಕ ಮೃತಪಟ್ಟಿದ್ದಾರೆ.
ಕೇರಳದಲ್ಲಿ ಅಕ್ಟೋಬರ್ 1ರಿಂದ 15ರ ವರೆಗಿನ ಅವಧಿಯಲ್ಲಿ 833.8 ಎಂಎಂ ಮಳೆ ಸುರಿದಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಹಲವು ವಿಶ್ವವಿದ್ಯಾನಿಲಯಗಳು ಸೋಮವಾರ ಹಾಗೂ ಮಂಗಳವಾರ ನಡೆಯಲಿದ್ದ ಪರೀಕ್ಷೆಯನ್ನು ಮುಂದೂಡಿವೆ. 7 ದಕ್ಷಿಣ ಕೇಂದ್ರ ಜಿಲ್ಲೆಗಳ ಜಿಲ್ಲಾಧಿಕಾರಿಗಳು ವೃತ್ತಿಪರ ಕಾಲೇಜುಗಳು ಸೇರಿದಂತೆ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಸೋಮವಾರ ರಜೆ ಘೋಷಿಸಿದ್ದರು.
0 التعليقات: