Wednesday, 24 November 2021

ಕತ್ರಿನಾ ಕೈಫ್ ಕೆನ್ನೆಯಂತಹ ರಸ್ತೆಗಳನ್ನು ನಿರ್ಮಿಸಬೇಕೆಂಬ ರಾಜಸ್ಥಾನ ಸಚಿವರ ಹೇಳಿಕೆ ವೈರಲ್

 ಕತ್ರಿನಾ ಕೈಫ್ ಕೆನ್ನೆಯಂತಹ ರಸ್ತೆಗಳನ್ನು ನಿರ್ಮಿಸಬೇಕೆಂಬ ರಾಜಸ್ಥಾನ ಸಚಿವರ ಹೇಳಿಕೆ ವೈರಲ್

ಉದಯಪುರವತಿ(ರಾಜಸ್ಥಾನ): ರಾಜಸ್ಥಾನದ ಸಚಿವ ರಾಜೇಂದ್ರ ಸಿಂಗ್ ಗುಧಾ ಅವರು ತಮ್ಮ ಕ್ಷೇತ್ರದ ರಸ್ತೆಗಳು ನಟಿ ಕತ್ರಿನಾ ಕೈಫ್ ಅವರ ಕೆನ್ನೆಯಂತಿರಬೇಕು ಎಂದು ಹೇಳುವ ವೀಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆದ ನಂತರ ಟೀಕೆಗೆ ಗುರಿಯಾಗಿದ್ದಾರೆ.

ಇತ್ತೀಚೆಗೆ ಅಧಿಕಾರವಹಿಸಿಕೊಂಡಿರುವ ಸಚಿವರು ತಮ್ಮ ಕ್ಷೇತ್ರವಾದ ಉದಯಪುರವತಿಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಗುಂಪಿನಿಂದ ಯಾರೋ ಗ್ರಾಮಗಳ ರಸ್ತೆಗಳ ಸ್ಥಿತಿಯ ಬಗ್ಗೆ ದೂರಿದರು. ಆಗ ಅವರು ಅಧಿಕಾರಿಗಳಿಗೆ ರಸ್ತೆಗಳನ್ನು ನಟಿ ಕತ್ರಿನಾ ಕೈಫ್ ಅವರ ಕೆನ್ನೆಯ ಹಾಗೆ ನುಣುಪಾಗಿ ಮಾಡಬೇಕೆಂದು ಸೂಚಿಸಿದರು. ಆಗ ನೆರೆದಿದ್ದ ಜನರು ಕೇಕೆ ಹಾಕುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು.

ಅಶೋಕ್ ಗೆಹ್ಲೋಟ್ ನೇತೃತ್ವದ ರಾಜಸ್ಥಾನ ಸರಕಾರದ ಇತ್ತೀಚಿನ ಕ್ಯಾಬಿನೆಟ್ ಪುನರ್ರಚನೆಯ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರಿಗೆ ಕೇವಲ ಮೂರು ದಿನಗಳ ಹಿಂದೆ ಸೈನಿಕ ಕಲ್ಯಾಣ್, ಗೃಹರಕ್ಷಕರು, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಖಾತೆಯನ್ನು ನೀಡಲಾಯಿತು.

ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಸಚಿವರ ಹೇಳಿಕೆಯನ್ನು ಅನುಚಿತ ಎಂದು ಕರೆದಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ರಾಜಕೀಯ ಪ್ರಾತಿನಿಧ್ಯದ ಭರವಸೆ ಹಾಗೂ ಮಹಿಳೆಯರ ಸಮಸ್ಯೆಗಳನ್ನು ಎತ್ತಿ ತೋರಿಸುತ್ತಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪ್ರತಿಕ್ರಿಯೆಗೆ ಒತ್ತಾಯಿಸಿದ್ದಾರೆ.

ರಾಜಕಾರಣಿಗಳು ಇಂತಹ ಹೇಳಿಕೆ ನೀಡಿರುವುದು ಇದೇ ಮೊದಲಲ್ಲ. ಈ ಹಿಂದೆ ಹಲವಾರು ಸಚಿವರು ತಮ್ಮ ಕ್ಷೇತ್ರಗಳಲ್ಲಿ ನಟಿ-ರಾಜಕಾರಣಿ ಹೇಮಾ ಮಾಲಿನಿ ಅವರ ಕೆನ್ನೆಯಂತೆ ರಸ್ತೆಗಳನ್ನು ನಿರ್ಮಿಸುವ ಭರವಸೆ ನೀಡಿದ್ದಾರೆ.


SHARE THIS

Author:

0 التعليقات: