Wednesday, 10 November 2021

ಬಿಟ್ ಕಾಯಿನ್ ಹಗರಣ: ಕಾಂಗ್ರೆಸ್ ನಾಯಕರ ಹೆಸರಿದ್ದರೆ ಬಹಿರಂಗಪಡಿಸಲಿ; ಸಿದ್ದರಾಮಯ್ಯ

 

ಬಿಟ್ ಕಾಯಿನ್ ಹಗರಣ: ಕಾಂಗ್ರೆಸ್ ನಾಯಕರ ಹೆಸರಿದ್ದರೆ ಬಹಿರಂಗಪಡಿಸಲಿ; ಸಿದ್ದರಾಮಯ್ಯ

ಬೆಂಗಳೂರು: ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿಯವರದ್ದೇ ಸರಕಾರ ಇದೆ. ಪೊಲೀಸ್ ಮತ್ತು ತನಿಖಾ ಸಂಸ್ಥೆಗಳು ಅವರ ಕೈಯಲ್ಲೇ ಇವೆ. ಬಿಟ್ ಕಾಯಿನ್ ಹಗರಣದಲ್ಲಿ ಸದ್ದಿಲ್ಲದೆ ಹಣ ತಿಂದ ಅಧಿಕಾರಿಗಳ ಮತ್ತು ರಾಜಕಾರಣಿಗಳ ಹೆಸರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಹಿರಂಗಪಡಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ಬುಧವಾರ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಗರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಮತ್ತು ರಾಜಕಾರಣಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ತಾವು ತಪ್ಪಿಸಿಕೊಳ್ಳಲು ಕಾಂಗ್ರೆಸ್ ನಾಯಕರ ಹೆಸರೂ ಇದೆ ಎಂದು ಹೇಳಿಕೆ ನೀಡಿ ಜಾರಿಕೊಳ್ಳಬಾರದು. ಕಾಂಗ್ರೆಸ್ಸಿನವರ ಹೆಸರಿದ್ದರೆ ಅವರ ಹೆಸರನ್ನೂ ಹೇಳಲಿ. ಅವರನ್ನೂ ಬಂಧಿಸಲಿ, ಕಾನೂನು ಕ್ರಮ ತೆಗೆದುಕೊಳ್ಳಲಿ ಎಂದು ಅವರು ಸವಾಲು ಹಾಕಿದರು.

ದಲಿತ ಮುಖ್ಯಮಂತ್ರಿ ವಿಚಾರದ ಬಗ್ಗೆ ಬಿಜೆಪಿ ಸವಾಲಿಗೆ ಪ್ರತಿಕ್ರಿಯಿಸಿದ ಅವರು, ದೇಶದಲ್ಲಿ ಅತಿ ಹೆಚ್ಚು ಮಂದಿ ದಲಿತರು ಮುಖ್ಯಮಂತ್ರಿಗಳಾಗಿರುವ ಚರಿತ್ರೆ ಮತ್ತು ವರ್ತಮಾನ ಇರುವುದು ಕಾಂಗ್ರೆಸ್ಸಿಗೆ ಮಾತ್ರ. ಬಿಜೆಪಿಯಲ್ಲಿ ಯಾರೂ ದಲಿತರೇ ಇಲ್ಲವೇ? ಈಗ ಅವರದೇ ಸರಕಾರ ಇದೆ. ಬೊಮ್ಮಾಯಿ ಅವರನ್ನು ಕೆಳಗಿಳಿಸಿ ದಲಿತರನ್ನು ಮುಖ್ಯಮಂತ್ರಿ ಮಾಡಲಿ ಎಂದರು.

ನಮ್ಮ ಸರಕಾರ ಇರುವ ಪಂಜಾಬ್‍ನಲ್ಲಿ ನಾವು ದಲಿತ ಮುಖ್ಯಮಂತ್ರಿ ಮಾಡಿದ್ದೇವೆ. ಈಗ ಇಲ್ಲಿ ಬಿಜೆಪಿಯವರ ಸರಕಾರ ಇದೆ. ಹೀಗಾಗಿ ಬಿಜೆಪಿಯವರಿಗೆ ದಲಿತರನ್ನು ಮುಖ್ಯಮಂತ್ರಿ ಮಾಡಲು ಅವಕಾಶ ಇದೆ, ಮಾಡಿ ತೋರಿಸಲಿ ಎಂದು ಸಿದ್ದರಾಮಯ್ಯ ಮರು ಸವಾಲು ಹಾಕಿದರು.


SHARE THIS

Author:

0 التعليقات: