ಭಾರತದಲ್ಲಿ ಪ್ರತಿ ದಿನ ಐವರು ಪೊಲೀಸ್ ಕಸ್ಟಡಿಯಲ್ಲಿ ಸಾಯುತ್ತಿದ್ದಾರೆ.
ಹೊಸದಿಲ್ಲಿ,ನ.15: ಉತ್ತರ ಪ್ರದೇಶದ ಕಾಸಗಂಜ್ ಪೊಲೀಸ್ ಠಾಣೆಯಲ್ಲಿ 22ರ ಹರೆಯದ ಅಲ್ತಾಫ್ನ ಸಾವು ಬಿರುಗಾಳಿಯನ್ನೆಬ್ಬಿಸಿದೆ. ಆತ ತನ್ನ ಜಾಕೆಟ್ ಹುಡ್ನ ದಾರದಿಂದ ವಾಷ್ರೂಮಿನಲ್ಲಿಯ ನೆಲದಿಂದ ಕೇವಲ ಎರಡು ಅಡಿ ಎತ್ತರದಲ್ಲಿರುವ ನೀರಿನ ನಲ್ಲಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿಕೊಂಡಿದ್ದಾರೆ. ಆದರೆ ಇದನ್ನು ನಂಬಲಸಾಧ್ಯ ಎಂದಿರುವ ಆತನ ಕುಟುಂಬವು, ಪೊಲೀಸರೇ ಅಲ್ತಾಫ್ನನ್ನು ಕೊಂದಿದ್ದಾರೆ ಎಂದು ಆರೋಪಿಸಿದೆ. ಕಸ್ಟಡಿ ಸಾವುಗಳ ಬಗ್ಗೆ ನಮ್ಮ ಕಾನೂನು ಏನು ಹೇಳುತ್ತದೆ?
ಸರ್ವೋಚ್ಚ ನ್ಯಾಯಾಲಯವು ಕಸ್ಟಡಿ ಸಾವುಗಳನ್ನು ‘ಕಾನೂನಿನ ಆಳ್ವಿಕೆಯಲ್ಲಿರುವ ನಾಗರಿಕ ಸಮಾಜದಲ್ಲಿಯ ಅತ್ಯಂತ ಕೆಟ್ಟ ಅಪರಾಧಗಳಲ್ಲಿ ಒಂದು ’ಎಂದು ಬಣ್ಣಿಸಿದೆ. ಆದಾಗ್ಯೂ ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಸ್ಟಡಿ ಸಾವುಗಳು ಸಂಭವಿಸುತ್ತಿವೆ. ಚಿತ್ರಹಿಂಸೆ ವಿರುದ್ಧ ರಾಷ್ಟ್ರೀಯ ಅಭಿಯಾನದ ಪ್ರಕಾರ 2019ರಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಪ್ರತಿ ದಿನ ಐವರು ಸಾವನ್ನಪ್ಪಿದ್ದರು. ಅದರ 2020ರ ವರದಿಯಂತೆ ಎಲ್ಲ ರಾಜ್ಯಗಳ ಪೈಕಿ ಉತ್ತರ ಪ್ರದೇಶದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಕಸ್ಟಡಿ ಸಾವುಗಳು ಸಂಭವಿಸಿದ್ದವು.
ಮಂಗಳವಾರ ಪೊಲೀಸ್ ಕಸ್ಟಡಿಯಲ್ಲಿ ಅಲ್ತಾಫ್ ಸಾವಿನ ಬಳಿಕ ಕಸ್ಟಡಿ ಸಾವುಗಳು ಮತ್ತೊಮ್ಮೆ ಗಮನವನ್ನು ಸೆಳೆದಿವೆ. ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಕಸ್ಟಡಿ ಸಾವುಗಳ ಹಿನ್ನೆಲೆಯಲ್ಲಿ ಶಾಸಕಾಂಗ ಮತ್ತು ನ್ಯಾಯಾಂಗ ಇದನ್ನು ನಿಭಾಯಿಸಲು ಆಗಾಗ್ಗೆ ಕಾರ್ಯವಿಧಾನಗಳನ್ನು ರೂಪಿಸಿವೆ.
ಪೊಲೀಸ್ ಕಸ್ಟಡಿಯಲ್ಲಿ ಸಾವು ಸಂಭವಿಸಿದರೆ ಎಫ್ಐಆರ್ ದಾಖಲಿಸಿಕೊಳ್ಳುವುದನ್ನು ಕಾನೂನು ಕಡ್ಡಾಯಗೊಳಿಸಿದೆ. 2005ರಲ್ಲಿ ಕ್ರಿಮಿನಲ್ ವಿಚಾರಣೆಗಳನ್ನು ಹೇಗೆ ನಡೆಸಬೇಕು ಎಂಬ ಬಗ್ಗೆ ನಿಯಮಗಳನ್ನೊಳಗೊಂಡಿರುವ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ 1971ನ್ನು ತಿದ್ದುಪಡಿಗೊಳಿಸಿ ಕಲಂ 176ರಡಿ ಕಸ್ಟಡಿ ಸಾವುಗಳ ಬಗ್ಗೆ ಪೊಲೀಸರ ತನಿಖೆಯ ಜೊತೆಗೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅಥವಾ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ರಿಂದ ವಿಚಾರಣೆಯನ್ನು ಕಡ್ಡಾಯಗೊಳಿಸಲಾಗಿತ್ತು.
0 التعليقات: