Wednesday, 10 November 2021

ಆರೆಸ್ಸೆಸ್ ಮತಾಂಧತೆ ಕಾರಣಕ್ಕೆ ಟಿಪ್ಪು ವಿರೋಧಿಸುತ್ತಿದೆ: ಸಿದ್ದರಾಮಯ್ಯ

 

ಆರೆಸ್ಸೆಸ್ ಮತಾಂಧತೆ ಕಾರಣಕ್ಕೆ ಟಿಪ್ಪು ವಿರೋಧಿಸುತ್ತಿದೆ: ಸಿದ್ದರಾಮಯ್ಯ

ಬೆಂಗಳೂರು: ಟಿಪ್ಪುಸುಲ್ತಾನ್ ಜಾತ್ಯತೀತ ರಾಜ ಮತ್ತು ಜನನಾಯಕ. ಬ್ರಿಟಿಷರ ನಿದ್ದೆಗೆಡಿಸಿದ್ದ ಟಿಪ್ಪು ಆಸ್ಥಾನದಲ್ಲಿ ದೀವಾನರಾಗಿದ್ದವರು, ಮಂತ್ರಿಗಳಾಗಿದ್ದವರು ಹಿಂದುಗಳೆ. ಉಳುವವನೇ ಭೂ ಒಡೆಯ ಕಾನೂನನ್ನು ಮೊದಲಿಗೆ ಜಾರಿಗೆ ತಂದಿದ್ದು ಹೈದರಾಲಿ. ಕನ್ನಂಬಾಡಿ ಕಟ್ಟೆಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಬುಧವಾರ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೃಂಗೇರಿ ಸೇರಿ ಹಲವು ಮಠ, ಮಂದಿರಗಳಿಗೆ ಟಿಪ್ಪು ರಕ್ಷಣೆ, ನೆರವು ನೀಡಿರುವುದಕ್ಕೆ ಅಪಾರ ದಾಖಲೆಗಳಿವೆ. ಟಿಪ್ಪು ಎಲ್ಲೆಲ್ಲಿ ಮಸೀದಿ ಕಟ್ಟಿಸಿದ್ದರೋ ಅದರ ಪಕ್ಕದಲ್ಲೇ ದೇವಸ್ಥಾನಗಳನ್ನೂ ಕಟ್ಟಿಸುತ್ತಿದ್ದರು ಎನ್ನುವುದಕ್ಕೂ ದಾಖಲೆಗಳಿವೆ. ಜಾತಿವಾದಿ ಸಂಘಟನೆ ಆರೆಸ್ಸೆಸ್ ಮತಾಂಧತೆ ಕಾರಣಕ್ಕೆ ಟಿಪ್ಪು ಅವರನ್ನು ವಿರೋಧಿಸುತ್ತದೆ. ಇದಕ್ಕೆಲ್ಲ ನಾವು ಮಣೆ ಹಾಕುವುದಿಲ್ಲ ಎಂದರು.

ಧರ್ಮದ ಕಾರಣಕ್ಕೆ ಟಿಪ್ಪುವನ್ನು ವಿರೋಧಿಸುವ ಆರೆಸ್ಸೆಸ್ ಯಾವತ್ತೂ ಬ್ರಿಟಿಷರ ವಿರುದ್ಧ ಹೋರಾಡಿಲ್ಲ. ಬ್ರಿಟಿಷರ ವಿರುದ್ಧ ಹೋರಾಡಿ ಆರೆಸ್ಸೆಸ್‍ನ ಒಬ್ಬನಾದರೂ ಸತ್ತಿರುವ ಉದಾಹರಣೆ ಇದ್ದರೆ ಹೇಳಲಿ. ಬ್ರಿಟಿಷರ ವಿರುದ್ಧ ರಾಜಿರಹಿತವಾಗಿ ಹೋರಾಡಿ, ಅವರಿಗೆ ಯಾವತ್ತೂ ತಲೆತಗ್ಗಿಸದೆ ತಮ್ಮ ಮಕ್ಕಳನ್ನೇ ಒತ್ತೆ ಇಟ್ಟ ಟಿಪ್ಪು ಜಯಂತಿ ಆಚರಣೆ ಆರಂಭಿಸಿದ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಸಿದ್ದರಾಮಯ್ಯ ಹೇಳಿದರು.

ನಮ್ಮ ಸರಕಾರದ ಅವಧಿಯಲ್ಲಿ ಕೆಂಪೇಗೌಡ ಜಯಂತಿ, ಕಿತ್ತೂರು ರಾಣಿ ಚನ್ನಮ್ಮ ಜಯಂತಿ, ಟಿಪ್ಪು ಜಯಂತಿ ಆಚರಣೆ ಆರಂಭಿಸಿದ ಹೆಮ್ಮೆ ನಮ್ಮದು. ಭಾರತವನ್ನು ದಾಸ್ಯಕ್ಕೆ ದೂಡಿದ ಬ್ರಿಟಿಷರ ಪರವಾಗಿ ನಾವು ಇರಬೇಕೋ? ಬ್ರಿಟಿಷರನ್ನು ಭಾರತದಿಂದ ಒದ್ದೋಡಿಸಲು ಹೋರಾಡಿದ ಟಿಪ್ಪು ಸುಲ್ತಾನ್ ಪರವಾಗಿ ಇರಬೇಕೋ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಬ್ರಿಟಿಷರ ವಿರುದ್ಧ ಅವತ್ತೂ ಬಾಯಿ ಬಿಡದ, ಇವತ್ತೂ ಬಾಯ ಬಿಡದ ಆರೆಸ್ಸೆಸ್ ಟಿಪ್ಪುವನ್ನು ವಿರೋಧಿಸುವುದು ಹಾಸ್ಯಾಸ್ಪದ ಎಂದರು.

ಮೈಸೂರು ಪ್ರಾಂತ್ಯಕ್ಕೆ ಟಿಪ್ಪು ಕೊಡುಗೆ ಅಪಾರವಾಗಿದೆ. ರೇಷ್ಮೆ ಬೆಳೆ ಆರಂಭಿಸಿದ್ದು ಟಿಪ್ಪು, ಆ ಕಾಲದಲ್ಲೇ ವಿದೇಶಿ ವಿನಿಮಯ ಪ್ರಾರಂಭಿಸಿ ವ್ಯಾಪಾರ ವಹಿವಾಟಿಗೆ ಮಹತ್ವ ನೀಡಿದ್ದಲ್ಲದೆ ಜಾತ್ಯತೀತ ಆಡಳಿತ ನೀಡಿ ಹಿಂದೂ ದಿವಾನರನ್ನು, ಮಂತ್ರಿಗಳನ್ನು ನೇಮಿಸಿಕೊಂಡು ಜನ ನಾಯಕ ಎನ್ನಿಸಿಕೊಂಡಿದ್ದರು. ಹೀಗಾಗಿ ಆರೆಸ್ಸೆಸ್ ಹೇಳುವ ಸುಳ್ಳುಗಳಿಗೆ ಸೊಪ್ಪು ಹಾಕುವ ಅಗತ್ಯ ಇಲ್ಲ. ಈ ದೇಶ 136 ಕೋಟಿ ಭಾರತೀಯರಿಗೂ ಸೇರಿದ್ದು. ಕೇವಲ ಒಂದು ಜಾತಿಯವರಿಗೆ, ಒಂದು ಧರ್ಮಕ್ಕೆ ಮಾತ್ರ ಈ ದೇಶ ಸೇರಿದ್ದಲ್ಲ. ಸಂಕುಚಿತ ಸಿದ್ಧಾಂತಕ್ಕಾಗಿ ಭಾರತೀಯರ ನಡುವೆ ಬಿರುಕು ತರಬಾರದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್, ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಟಿಪ್ಪು ಸುಲ್ತಾನ್ ಜಯಂತಿಯ ಶುಭಾಶಯ ಕೋರಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಮಾಜಿ ಸಚಿವ ಎಂ.ಬಿ.ಪಾಟೀಲ್, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಶಾಸಕರಾದ ಪ್ರಕಾಶ್ ರಾಥೋಡ್, ಮಹಾಂತೇಶ ಕೌಜಲಗಿ, ಮಾಜಿ ಶಾಸಕ ಅಶೋಕ್ ಪಟ್ಟಣ್ ಹಾಜರಿದ್ದರು.


SHARE THIS

Author:

0 التعليقات: