Monday, 22 November 2021

ಉಡುಪಿ; ಮನೆ ಕಳ್ಳತನದ ಆರೋಪಿಯನ್ನು 3 ದಿನದಲ್ಲಿ ಬಂಧಿಸಿದ ಪೊಲೀಸರು

 ಉಡುಪಿ; ಮನೆ ಕಳ್ಳತನದ ಆರೋಪಿಯನ್ನು 3 ದಿನದಲ್ಲಿ ಬಂಧಿಸಿದ ಪೊಲೀಸರು

ಉಡುಪಿ: ಕಳೆದ ನ.17ರಂದು ಬೆಳಗಿನ ಜಾವ ಶಿವಳ್ಳಿ ಗ್ರಾಮದ ಗುಂಡಿಬೈಲು ಜುಮಾದಿಕಟ್ಟೆ ದೇವಸ್ಥಾನದ ಹಿಂಬದಿ ದುಗ್ಗಣ್ಣಬೆಟ್ಟು ಮಾರ್ಗದಲ್ಲಿ ಹಳೆ ಮನೆಯೊಂದರ ಬಾಗಿಲು ಮುರಿದು 3.70 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ಸಾಮಗ್ರಿ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ರವಿವಾರ ಬೆಳ್ಳಂಪಳ್ಳಿಯಲ್ಲಿ ಬಂಧಿಸಿದ್ದಾರೆ.

ಘಟನಾ ಸ್ಥಳದಲ್ಲಿ ದೊರೆತ ಸಾಕ್ಷಾಧಾರ ಹಾಗೂ ತಾಂತ್ರಿಕ ವಿಧಾನದ ಮೂಲಕ ಕಳ್ಳತನ ನಡೆಸಿದ ಸುಕೇಶ್ ನಾಯಕ್‌ನನ್ನು ಬೆಳ್ಳಂಪಳ್ಳಿಯ ಕ್ವಾಲಿಟಿ ವೈನ್‌ಶಾಪ್ ಬಳಿ ಬಂಧಿಸಿ ವಿಚಾರಣೆಗೊಳಪಡಿಸಿದಾಗ ಆತ ಕಳ್ಳತನ ಮಾಡಿ ಗುಂಡಿಬೈಲು ಪಂಚಧೂಮಾವತಿ ದೈವಸ್ಥಾನದ ಬಳಿ ಶ್ರೀಕರ ಕಾಮತ್ ಎಂಬವರ ಪೊದರು ಜಾಗದ ಮಣ್ಣಿನಡಿ ಹೂತಿಟ್ಟ ಸುಮಾರು 3.60 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದಾರೆ.

ಗುಂಡಿಬೈಲಿನ ಬಾಬು ಆಚಾರ್ಯ ಎಂಬವರು ದುಗ್ಗಣ್ಣಬೆಟ್ಟು ಮಾರ್ಗದಲ್ಲಿ ಹೊಸ ಮನೆಯನ್ನು ನಿರ್ಮಿಸಿದ್ದು, ಪಕ್ಕದಲ್ಲೇ ಇದ್ದ ಹಳೆಮನೆಯ ಬೀಗ ಮುರಿದು ನ.16ರ ರಾತ್ರಿ ನುಗ್ಗಿದ ಆರೋಪಿ, ಕಪಾಟಿನಲ್ಲಿದ್ದ ಬೀಗದಿಂದ ಲಾಕರ್‌ನ್ನು ತೆರೆದು ಅದರಲ್ಲಿದ್ದ 90 ಗ್ರಾಂ ತೂಕದ 3.60 ರೂ. ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಸಾಮಗ್ರಿ ಅಲ್ಲದೇ ದೇವರ ಡಬ್ಬಿಯಲ್ಲಿದ್ದ ನಗದನ್ನು ಕಳವು ಮಾಡಿದ್ದ.

ಘಟನಾ ಸ್ಥಳದಲ್ಲಿ ದೊರೆತ ಸುಳಿವಿನ ಆಧಾರದಲ್ಲಿ ಪೊಲೀಸರು ಹಳೆಯ ಆರೋಪಿಯಾದ ಸುಕೇಶ್‌ ನಾಯಕ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತನೇ ಈ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡ. ಆರೋಪಿ ಈ ಹಿಂದೆ ಹಿರಿಯಡ್ಕ, ಮಣಿಪಾಲ, ಉಡುಪಿ ನಗರ ಹಾಗೂ ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ಹಲವು ಪ್ರಕರಣಗಳ ಆರೋಪಿಯಾಗಿದ್ದು, ಜೈಲಿನಿಂದ ಒಂದು ತಿಂಗಳ ಹಿಂದಷ್ಟೇ ಬಿಡುಗಡೆಗೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

34 ವರ್ಷ ಪ್ರಾಯದ ಕುಕ್ಕೆಹಳ್ಳಿ ಗ್ರಾಮದ ಕುಕ್ಕಿಕಟ್ಟೆ ಮಂಗಳಾ ರೈಸ್‌ಮಿಲ್ ಬಳಿ ನಿವಾಸಿಯಾದ ಆರೋಪಿ ಸುಕೇಶ್ ನಾಯಕ್‌ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆರೋಪಿಯನ್ನು ಉಡುಪಿ ಡಿವೈಎಶ್ಪಿ ಸುಧಾಕರ ಸದಾನಂದ ನಾಯ್ಕಿರ ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಪಿ. ಅವರು ತಮ್ಮ ಸಿಬ್ಬಂದಿಗಳ ನೆರವಿನೊಂದಿಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


SHARE THIS

Author:

0 التعليقات: