Saturday, 20 November 2021

ಏರ್‌ ಆ್ಯಂಬುಲನ್ಸ್‌ ದರ 30,000ದಿಂದ 50,000ಕ್ಕೆ ಏರಿಕೆ ಲಕ್ಷದ್ವೀಪದಲ್ಲಿ ಮತ್ತೆ ಭುಗಿಲೆದ್ದ ಪ್ರತಿಭಟನೆಗಳು: ಎಫ್ ಆರ್ ಬ್ರಹ್ಮಾಸ್ತ್ರ ಬಳಸುತ್ತಿರುವ ಆಡಳಿತ

ಏರ್‌ ಆ್ಯಂಬುಲನ್ಸ್‌ ದರ  30,000 ದಿಂದ  50,000ಕ್ಕೆ ಏರಿಕೆ !                                            ಲಕ್ಷದ್ವೀಪದಲ್ಲಿ ಮತ್ತೆ ಭುಗಿಲೆದ್ದ ಪ್ರತಿಭಟನೆಗಳು: ಎಫ್ ಆರ್ ಬ್ರಹ್ಮಾಸ್ತ್ರ ಬಳಸುತ್ತಿರುವ ಆಡಳಿತ


ಕೊಝಿಕ್ಕೋಡ್,ನ.18: ಕೇಂದ್ರಾಡಳಿತ ಪ್ರದೇಶವಾಗಿರುವ ಲಕ್ಷದ್ವೀಪದಲ್ಲಿ ಆಡಳಿತದ ಜನವಿರೋಧಿ ನಿರ್ಧಾರಗಳ ವಿರುದ್ಧ ಹೊಸದಾಗಿ ಪ್ರತಿಭಟನೆಗಳು ಆರಂಭಗೊಂಡಿದ್ದು,ಅಧಿಕಾರಿಗಳು ಟೀಕಾಕಾರರ ಧ್ವನಿಯನ್ನಡಗಿಸಲು ಬೆದರಿಕೆ ತಂತ್ರಗಳನ್ನು ಬಳಸುತ್ತಿರುವಂತಿದೆ.

ಆಡಳಿತವು ಸಾರಿಗೆ ದರಗಳನ್ನು ಹೆಚ್ಚಿಸಿದ್ದನ್ನು ವಿರೋಧಿಸಿ ಲಕ್ಷದ್ವೀಪದ ಏಕೈಕ ಸಂಸದ ಹಾಗೂ ಎನ್ಸಿಪಿ ನಾಯಕ ಮುಹಮ್ಮದ್ ಫೈಝಲ್ ಅವರು ಪ್ರತಿಭಟನೆಯನ್ನು ನಡೆಸಿದ ಬಳಿಕ ‘ಸಾರ್ವಜನಿಕ ತೊಂದರೆಗಳನ್ನು’ಉಂಟು ಮಾಡಿದ್ದಕ್ಕಾಗಿ ಪೊಲೀಸರು ಅವರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. 

ಪ್ರತ್ಯೇಕ ಘಟನೆಯಲ್ಲಿ ವಿದ್ಯಾರ್ಥಿ ವೇತನಗಳ ಮರುಸ್ಥಾಪನೆಯನ್ನು ಆಗ್ರಹಿಸಿ ಮುಷ್ಕರವನ್ನು ನಡೆಸಿದ್ದವರ ವಿರುದ್ಧ ಶಿಸ್ತು ಕ್ರಮವನ್ನು ಜರುಗಿಸುವ ಸಂಭವನೀಯ ಉದ್ದೇಶದಿಂದ ಶಿಕ್ಷಣ ಇಲಾಖೆಯ ನಿರ್ದೇಶಕರು ವಿದ್ಯಾರ್ಥಿ ಪ್ರತಿಭಟನಾಕಾರರ ವಿವರಗಳನ್ನು ಸಲ್ಲಿಸುವಂತೆ ಸೂಚಿಸಿ ಶಾಲೆಗಳ ಪ್ರಾಂಶುಪಾಲರಿಗೆ ನೋಟಿಸ್ಗಳನ್ನು ಹೊರಡಿಸಿದ್ದಾರೆ.

ಪ್ರಯಾಣಿಕರ ಹಡಗುಗಳು ಮತ್ತು ಏರ್ ಆ್ಯಂಬುಲನ್ಸ್ ಸೇರಿದಂತೆ ಸಾರ್ವಜನಿಕ ಸಾರಿಗೆಗಳು ಮತ್ತು ಅಗತ್ಯ ಸೇವೆಗಳ ದರಗಳಲ್ಲಿ ಏರಿಕೆಯನ್ನು ವಿರೋಧಿಸಿ ಫೈಝಲ್ ಮತ್ತು ಎನ್ಸಿಪಿ

ಕಾರ್ಯಕರ್ತರು ನ.10ರಂದು ಲಕ್ಷದ್ವೀಪದ ರಾಜಧಾನಿ ಕವರಟ್ಟಿಯಲ್ಲಿ ಪ್ರತಿಭಟನೆಯನ್ನು ನಡೆಸಿದ್ದರು.

ದರ ಏರಿಕೆಯು ಲಕ್ಷದ್ವೀಪದ ಜನರ ಬದುಕುಗಳನ್ನು ಸಂಕಷ್ಟಕ್ಕೆ ತಳ್ಳುತ್ತದೆ ಎನ್ನುತ್ತಾರೆ ಈ ಕೇಂದ್ರಾಡಳಿತ ಪ್ರದೇಶದ ನಾಯಕರು ಮತ್ತು ಜನಸಾಮಾನ್ಯರು. ಕೋವಿಡ್ ಬಿಕ್ಕಟ್ಟಿನಿಂದಾಗಿ ಇಲ್ಲಿಯ ಆರ್ಥಿಕತೆಯು ಹದಗೆಟ್ಟಿದ್ದು,ನೂರಾರು ನೌಕರರನ್ನು ಕೆಲಸದಿಂದ ತೆಗೆಯುವ ಆಡಳಿತದ ಇತ್ತೀಚಿನ ನಿರ್ಧಾರವು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಲಿದೆ.

ಲಕ್ಷದ್ವೀಪದಲ್ಲಿ ದ್ವೀಪಗಳು ಅರಬಿ ಸಮುದ್ರದಲ್ಲಿ ಹರಡಿಕೊಂಡಿದ್ದು, ಸೀಮಿತ ಆರೋಗ್ಯ ಮೂಲಸೌಕರ್ಯಗಳನ್ನು ಹೊಂದಿವೆ. ಹೀಗಾಗಿ ಏರ್ ಆ್ಯಂಬುಲನ್ಸ್ ಇಲ್ಲಿ ಅಗತ್ಯ ಸೇವೆಯಾಗಿದೆ.

ಹೆಚ್ಚಿಸಿರುವ ದರಗಳಂತೆ ಈಗ ಗಂಭೀರ ಸ್ಥಿತಿಯಲ್ಲಿರುವ ರೋಗಿಯನ್ನು ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಅತ್ಯಂತ ಹತ್ತಿರದ ತಾಣವಾಗಿರುವ ಕೇರಳಕ್ಕೆ ಒಯ್ಯಲು ಲಕ್ಷದ್ವೀಪದ ಕುಟುಂಬವೊಂದು ಏರ್ ಆ್ಯಂಬುಲನ್ಸ್ ಗೆ 30,000 ರೂ.ಗಳಿಂದ 50,000 ರೂ.ವರೆಗೂ ಪಾವತಿಸಬೇಕಾಗುತ್ತದೆ. ಇದು ರೋಗಿ ಮತ್ತು ಇಬ್ಬರು ಸಹಾಯಕರ ಟಿಕೆಟ್ ವೆಚ್ಚಗಳನ್ನು ಒಳಗೊಂಡಿದೆ. ವಿವಿಧ ಧ್ವೀಪಗಳಿಂದ ಪ್ರಯಾಣ ವೆಚ್ಚದಲ್ಲಿ ಕೊಂಚ ವ್ಯತ್ಯಾಸಗಳಿವೆ.

ಇದೇ ರೀತಿ ಪ್ರಯಾಣಿಕ ಹಡಗುಗಳಲ್ಲಿ ಅತ್ಯಂತ ಕೆಳದರ್ಜೆಯ ‘ಬಂಕ್’ನಲ್ಲಿ ಪ್ರಯಾಣ ದರವನ್ನು ಶೇ.50ರಷ್ಟು ಹೆಚ್ಚಿಸಲಾಗಿದೆ. ಈ ವರ್ಗದಲ್ಲಿ ಕೊಚ್ಚಿಯಿಂದ ಕವರಟ್ಟಿಗೆ 220 ರೂ.ಗಳಲ್ಲಿ ಪ್ರಯಾಣಿಸುತ್ತಿದ್ದವರು ಇನ್ನು 330 ರೂ.ಗಳನ್ನು ಪಾವತಿಸಬೇಕಿದೆ. ಲಕ್ಷದ್ವೀಪ ನಿವಾಸಿಗಳಿಗಾಗಿ ಮೊದಲ ಮತ್ತು ಎರಡನೇ ದರ್ಜೆ ಟಿಕೆಟ್ಗಳ ದರಗಳಲ್ಲಿಯೂ ಗಣನೀಯ ಏರಿಕೆಯನ್ನು ಮಾಡಲಾಗಿದೆ. ಈ ದರ್ಜೆಗಳಲ್ಲಿ ಕೊಚ್ಚಿಯಿಂದ ಕವರಟ್ಟಿಗೆ ಪ್ರಯಾಣಿಸಲು ಈಗ ಅನುಕ್ರಮವಾಗಿ 1,300 ರೂ. ಮತ್ತು 3,510 ರೂ.ಗಳನ್ನು ಪಾವತಿಸಬೇಕಾಗುತ್ತದೆ. 

ದೂರದ ದ್ವೀಪಗಳಿಗೆ ಪ್ರಯಾಣ ದರ ಇನ್ನೂ ಹೆಚ್ಚಾಗಿದೆ. ಇದು ಈಗಾಗಲೇ ಹಣಕಾಸು ಮುಗ್ಗಟ್ಟಿನಲ್ಲಿರುವ ಜನಸಾಮಾನ್ಯರಿಗೆ ತೀವ್ರ ಹೊಡೆತ ನೀಡಲಿದೆ ಎನ್ನುತ್ತಾರೆ ಸ್ಥಳೀಯರು. ಸ್ಥಳೀಯರಲ್ಲದ ಪ್ರಯಾಣಿಕರಿಗೆ ಶೇ.10ರಿಂದ ಶೇ.100ಕ್ಕೂ ಅಧಿಕ ದುಬಾರಿ ಪ್ರಯಾಣ ದರಗಳನ್ನು ವಿಧಿಸಲಾಗುತ್ತದೆ.

ಲಕ್ಷದ್ವೀಪದ ನಿವಾಸಿಗಳು ಶಿಕ್ಷಣ,ವ್ಯಾಪಾರ,ಆರೋಗ್ಯ ರಕ್ಷಣೆ ಮತ್ತು ಉದ್ಯೋಗಗಳಿಗಾಗಿ ಮುಖ್ಯ ಭೂಮಿಯನ್ನೇ ಪ್ರಧಾನವಾಗಿ ನೆಚ್ಚಿಕೊಂಡಿರುವುದರಿಂದ ಕೊಚ್ಚಿ ಮತ್ತು ಬೇಪೋರ್ ಹಾಗೂ ಮಂಗಳೂರಿನಂತಹ ದಕ್ಷಿಣ ಭಾರತದ ಬಂದರು ನಗರಗಳಿಗೆ ನಿಯಮಿತವಾಗಿ ಪ್ರಯಾಣಿಸುತ್ತಿರುತ್ತಾರೆ.

ಗುಜರಾತಿನ ಬಿಜೆಪಿ ನಾಯಕ ಪ್ರಫುಲ್ ಪಟೇಲ್ ನೇತೃತ್ವದ ಲಕ್ಷದ್ವೀಪ ಆಡಳಿತವು ವಿವಿಧ ಸರಕಾರಿ ಇಲಾಖೆಗಳಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 2000 ಗುತ್ತಿಗೆ ನೌಕರರನ್ನು ಮನೆಗೆ ಕಳುಹಿಸಿದೆ.

ಸಾಂಕ್ರಾಮಿಕದ ಮಧ್ಯದಲ್ಲಿಯೇ,ಪ್ರತಿಯೊಬ್ಬರೂ ಆರ್ಥಿಕ ಸಂಕಷ್ಟದಲ್ಲಿದ್ದಾಗ ನೌಕರರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಇದನ್ನು ಕಠಿಣ ಹೃದಯದವರು ಮಾತ್ರ ಮಾಡಬಹುದು ಎಂದು ಫೈಝಲ್ ಹೇಳಿದರು. ಹಿಂದೆಲ್ಲ ವಿಮಾನ ಮತ್ತು ಹಡಗು ಪ್ರಯಾಣ ದರಗಳಲ್ಲಿ ಏರಿಕೆ ಮಾಡಿದಾಗ ಏರ್ ಆ್ಯಂಬುಲನ್ಸ್ ನ ಶುಲ್ಕಗಳನ್ನು ಹೆಚ್ಚಿಸಿರಲಿಲ್ಲ. ಈಗ ಈ ಆಡಳಿತವು ಅದನ್ನೂ ಬಿಟ್ಟಿಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದಿರುವ ಪತ್ರದಲ್ಲಿ ಫೈಝಲ್, ದ್ವೀಪವಾಸಿಗಳ ಬದುಕನ್ನು ಮೂರಾಬಟ್ಟೆಯಾಗಿಸುವ ಅಮಾನವೀಯ ನಿರ್ಧಾರಗಳನ್ನು ಹಿಂದೆಗೆದುಕೊಳ್ಳುವಂತೆ ಪಟೇಲ್ ಗೆ ಕಠಿಣ ನಿರ್ದೇಶಗಳನ್ನು ಹೊರಡಿಸುವಂತೆ ಆಗ್ರಹಿಸಿದ್ದಾರೆ. ಶಾಂತಿಯುತ ಬದುಕಿಗಾಗಿ ಹೆಸರಾಗಿರುವ ಲಕ್ಷದ್ವೀಪದಲ್ಲಿ ಸುಮಾರು ಒಂದು ವರ್ಷದ ಹಿಂದೆ ಪಟೇಲ್ ಆಡಳಿತಗಾರನಾಗಿ ನೇಮಕಗೊಂಡ ಬಳಿಕ ಅವರ ಜನವಿರೋಧಿ ನಿರ್ಧಾರಗಳನ್ನು ವಿರೋಧಿಸಿ ಹಲವಾರು ಪ್ರತಿಭಟನೆಗಳು ನಡೆದಿವೆ.SHARE THIS

Author:

0 التعليقات: