Wednesday, 24 November 2021

ಮೇಘಾಲಯ: 18 ಕಾಂಗ್ರೆಸ್ ಶಾಸಕರ ಪೈಕಿ 12 ಮಂದಿ ಟಿಎಂಸಿಗೆ ಸೇರ್ಪಡೆ


ಮೇಘಾಲಯ: 18 ಕಾಂಗ್ರೆಸ್ ಶಾಸಕರ ಪೈಕಿ 12 ಮಂದಿ ಟಿಎಂಸಿಗೆ ಸೇರ್ಪಡೆ

ಕೊಲ್ಕತ್ತಾ : ಮೇಘಾಲಯದ ಮಾಜಿ ಸಿಎಂ ಮುಕುಲ್ ಸಂಗ್ಮಾ ಮತ್ತು 11 ಮಂದಿ ಕಾಂಗ್ರೆಸ್ ಶಾಸಕರು ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದು, ಈ ಈಶಾನ್ಯ ರಾಜ್ಯದಲ್ಲಿ ಮೊದಲ ಬಾರಿಗೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪ್ರಮುಖ ವಿರೋಧ ಪಕ್ಷವಾಗಲಿದೆ ಎಂದು ಉನ್ನತ ಮೂಲಗಳು ಹೇಳಿವೆ.

ಸೆಪ್ಟೆಂಬರ್‌ನಿಂದಲೇ ಯೋಜಿಸಲಾದ ಸಂಗ್ಮಾ ನಡೆಯ ಅಧಿಕೃತ ಘೋಷಣೆ ಗುರುವಾರ ಆಗಲಿದೆ ಎಂದು ತಿಳಿದುಬಂದಿದೆ. ಒಟ್ಟು 60 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 18 ಶಾಸಕರನ್ನು ಹೊಂದಿದೆ. ಐದು ಬಾರಿಯ ಶಾಸಕರಾಗಿರುವ ಸಂಗ್ಮಾ ಸದ್ಯಕ್ಕೆ ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ, ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಶಿಲ್ಲಾಂಗ್ ಸಂಸದ ವಿನ್ಸೆಂಟ್ ಎಚ್.ಪಾಲಾ ಅವರನ್ನು ನೇಮಕ ಮಾಡುತ್ತದೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಸಂಗ್ಮಾ ನಿರ್ಗಮಿಸಲು ಮುಂದಾಗಿದ್ದಾರೆ.

ಸಂಗ್ಮಾ ಈ ಬಗ್ಗೆ ಹೆಚ್ಚಿನ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಆದರೆ ಟಿಎಂಸಿ ಕಾರ್ಯತಂತ್ರಗಾರ ಪ್ರಶಾಂತ್ ಕಿಶೋರ್, ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮತ್ತು ಟಿಎಂಸಿ ರಾಜ್ಯಸಭಾ ಸದಸ್ಯೆ ಸುಷ್ಮಿತಾ ದೇವ್ ಜತೆಗಿನ ಅವರ ಮಾತುಕತೆ, ಈ ಭಿನ್ನಮತದ ಘೋಷಣೆ ಕೇವಲ ಅಧಿಕೃತವಾಗಿ ಆಗಬೇಕಿದೆ ಎಂಬ ಸುಳಿವು ನೀಡಿದೆ.

ಏತನ್ಮಧ್ಯೆ ಪಕ್ಷದ ಶಾಸಕರು ಟಿಎಂಸಿಗೆ ಪಕ್ಷಾಂತರ ನಡೆಸುವುದು ಕೇವಲ ನಾಟಕ; ಇದರಿಂದ ಪಕ್ಷವನ್ನು ದುರ್ಬಲಗೊಳಿಸ ಲಾಗದು ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ. ಪಕ್ಷವನ್ನು ದುರ್ಬಲಗೊಳಿಸುವ ಯತ್ನ ಹಿಂದೆಯೂ ನಡೆದಿತ್ತು; ಆದರೆ ಯಶಸ್ಸು ಸಿಕ್ಕಿರಲಿಲ್ಲ ಎಂದು ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ. ಮಾಜಿ ಸಂಸದ ಕೀರ್ತಿ ಆಜಾದ್ ಮತ್ತು ಹರ್ಯಾಣ ಮುಖಂಡ ಅಶೋಕ್ ತನ್ವರ್ ಮಂಗಳವಾರ ಟಿಎಂಸಿಗೆ ಸೇರ್ಪಡೆಯಾಗಿದ್ದರು.


 SHARE THIS

Author:

0 التعليقات: