Friday, 19 November 2021

1 ಗಂಟೆ 25 ನಿಮಿಷ ಅಮೆರಿಕದ ಅಧ್ಯಕ್ಷೆಯಾಗಿದ್ದ ಕಮಲಾ ಹ್ಯಾರಿಸ್

1 ಗಂಟೆ 25 ನಿಮಿಷ ಅಮೆರಿಕದ ಅಧ್ಯಕ್ಷೆಯಾಗಿದ್ದ ಕಮಲಾ ಹ್ಯಾರಿಸ್

ವಾಷಿಂಗ್ಟನ್: ಅಮೆರಿಕದ ಉಪಾಧ್ಯಕ್ಷೆಯಾಗಿರುವ ಭಾರತ ಮೂಲದ ಕಮಲಾ ಹ್ಯಾರಿಸ್ ಅವರು ಅಮೆರಿಕದ ಅಧ್ಯಕ್ಷೆಯಾಗಿ ಅಧಿಕಾರ ಚಲಾಯಿಸಿದ್ದಾರೆ. 1 ಗಂಟೆ 25 ನಿಮಿಷ ಅಧ್ಯಕ್ಷೀಯ ಅಧಿಕಾರ ಚಲಾಯಿಸುವ ಮೂಲಕ ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸ್ವತಃ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಅಧಿಕಾರ ಹಸ್ತಾಂತರಿಸಿದ್ದಾರೆ. ಅಧಿಕಾರದ ತಾತ್ಕಾಲಿಕ ಹಸ್ತಾಂತರವನ್ನು ಘೋಷಿಸುವ ಅಧಿಕೃತ ಪತ್ರಗಳನ್ನು 10:10ಕ್ಕೆ ಕಳುಹಿಸಲಾಗಿದೆ. ಬಳಿಕ 11.35ಕ್ಕೆ ಅವರು ಕೆಲಸಕ್ಕೆ ಮರಳಿದರು. ಈ ವೇಳೆ ಅಧ್ಯಕ್ಷ ಜೋ ಬೈಡನ್ ಅವರಿಗೆ ಅರಿವಳಿಕೆ ಔಷಧಿ ನೀಡಲಾಗಿತ್ತು ಎಂದು ಶ್ವೇತಭವನ ಅಮೆರಿಕ ಕಾಂಗ್ರೆಸ್‌ಗೆ ಶುಕ್ರವಾರ ತಿಳಿಸಿದೆ.

ಅಮೆರಿಕದ ಇತಿಹಾಸದಲ್ಲಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಅತ್ಯಂತ ಹಿರಿಯ ವ್ಯಕ್ತಿ ಬೈಡನ್ ಅವರು ತಮ್ಮ 79ನೇ ಹುಟ್ಟುಹಬ್ಬದ ಮುನ್ನಾದಿನ ಶುಕ್ರವಾರದ ಆರಂಭದಲ್ಲಿ ವಾಷಿಂಗ್ಟನ್‌ನ ಹೊರಗಿನ ವಾಲ್ಟರ್ ರೀಡ್ ವೈದ್ಯಕೀಯ ಕೇಂದ್ರಕ್ಕೆ ತೆರಳಿದರು. ವಾರ್ಷಿಕ ತಪಾಸಣೆ ಕಾರಣ ಬೈಡನ್ ಅವರ ಆರೋಗ್ಯ ತಪಾಸಣೆ ನಡೆಸಬೇಕಿತ್ತು ಎಂದು ಶ್ವೇತಭವನ ತಿಳಿಸಿದೆ.

ಕೊಲೊನೋಸ್ಕೋಪಿ ಪರೀಕ್ಷೆ ಸಮಯದಲ್ಲಿ ಬೈಡನ್‌ ಅವರಿಗೆ ಅರಿವಳಿಕೆ ಔಷಧಿಯನ್ನು ನೀಡಲಾಗಿತ್ತು. ಹೀಗಾಗಿ ಉಪಾಧ್ಯಕ್ಷರು ಅಧಿಕಾರವನ್ನು ವಹಿಸಿಕೊಳ್ಳುತ್ತಾರೆ. ಬೈಡನ್ ಅವರು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ಅಲ್ಪಾವಧಿಗೆ ಅಧಿಕಾರ ಹಸ್ತಾಂತರಿಸಿ ಆರೋಗ್ಯ ತಪಾಸಣೆಗೆ ತೆರಳಿದರು. ಈ ವೇಳೆ ಉಪಾಧ್ಯಕ್ಷೆ ವೆಸ್ಟ್ ವಿಂಗ್‌ನಲ್ಲಿರುವ ಅವರ ಕಚೇರಿಯಲ್ಲೇ ಕಾರ್ಯನಿರ್ವಹಿಸಿದರು ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ಹೇಳಿದರು.

57 ವರ್ಷದ ಕಮಲಾ ಹ್ಯಾರಿಸ್ ಅವರು ಅಮೆರಿಕದ ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸಿರುವ ಮೊದಲ ಮಹಿಳೆಯಾಗಿದ್ದಾರೆ.

2002 ಹಾಗೂ 2007ರಲ್ಲಿ ಅಮೆರಿಕ ಅಧ್ಯಕ್ಷರಾಗಿದ್ದ ಜಾರ್ಜ್ ಡಬ್ಲ್ಯು ಬುಶ್ ಕೂಡ ಕೊಲನೋಸ್ಕೋಪಿ ತಪಾಸಣೆಗೆ ಒಳಗಾಗಿದ್ದರು. ಈ ವೇಳೆ ಅಧಿಕಾರವನ್ನು ಉಪಾಧ್ಯಕ್ಷರಿಗೆ ಹಸ್ತಾಂತರಿಸಿದ್ದರು. ಇದೀಗ ಜೋ ಬೈಡನ್ ಕೂಡ ಉಪಾಧ್ಯಕ್ಷೆಗೆ ಅಧಿಕಾರ ಹಸ್ತಾಂತರಿಸಿ ತಪಾಸಣೆಗೆ ಒಳಗಾಗಿದ್ದಾರೆ.SHARE THIS

Author:

0 التعليقات: