Sunday, 3 October 2021

ಲಖೀಂಪುರ್ ಖೇರಿಗೆ ತೆರಳುತ್ತಿದ್ದ ಪ್ರಿಯಾಂಕಾ ಗಾಂಧಿಯ ಬಂಧನ

ಲಖೀಂಪುರ್ ಖೇರಿಗೆ ತೆರಳುತ್ತಿದ್ದ ಪ್ರಿಯಾಂಕಾ ಗಾಂಧಿಯ ಬಂಧನ

ಲಕ್ನೋ: ಕೃಷಿ ಕಾಯ್ದೆಗಳ ವಿರುದ್ಧ ರವಿವಾರ ರೈತರ ಪ್ರತಿಭಟನೆಯ ವೇಳೆ ನಡೆದ ಹಿಂಸಾಚಾರದಲ್ಲಿ ಬಲಿಯಾದ ಎಂಟು ಮಂದಿಯ ಕುಟುಂಬಗಳನ್ನು ಭೇಟಿಯಾಗಲು ಲಖೀಂಪುರ್ ಖೇರಿ ಜಿಲ್ಲೆಗೆ ಪ್ರಯಾಣಿಸುತ್ತಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಸೋಮವಾರ ಹರ್ಗಾಂವ್ ಎಂಬಲ್ಲಿ ಬಂಧಿಸಲಾಗಿದೆ ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ಹೇಳಿದ್ದಾರೆ.

‘‘ಬಿಜೆಪಿ ಏನು ಮಾಡಬಹುದು ಎಂದು ನಿರೀಕ್ಷಿಸಿದ ರೀತಿಯಲ್ಲಿಯೇ ನಡೆದಿದೆ. ಮಹಾತ್ಮ ಗಾಂಧೀಜಿಯ ಪ್ರಜಾಪ್ರಭುತ್ವ ದೇಶದಲ್ಲಿ ‘ಗೋಡ್ಸೆ’ಯ ಆರಾಧಕರು ಹರ್ಗಾಂವ್‌ನ ಅನ್ನದಾತರನ್ನು ಭೇಟಿಯಾಗಲು ಭಾರೀ ಮಳೆ ಮತ್ತು ಪೊಲೀಸ್ ಪಡೆಗಳ ವಿರುದ್ಧ ಹೋರಾಡಿದ ನಮ್ಮ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಿದ್ದಾರೆ. ಇದು ಹೋರಾಟದ ಆರಂಭ ಮಾತ್ರ. ಕಿಸಾನ್ ಏಕತಾ ಝಿಂದಾಬಾದ್’’ ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ತಮ್ಮ ಟ್ವೀಟ್ ಜತೆಗೆ ವೀಡಿಯೋವೊಂದನ್ನೂ ಶೇರ್ ಮಾಡಿರುವ ಶ್ರೀನಿವಾಸ್, ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಿರುವ ಸೀತಾಪುರ್ ಪೊಲಿಸ್ ಲೈನ್‌ಗೆ ಬರುವಂತೆಯೂ ಜನರಿಗೆ ಹೇಳಿದ್ದಾರೆ.

ರವಿವಾರ ಸಂಜೆ ಲಕ್ನೋ ವಿಮಾನ ನಿಲ್ದಾಣಕ್ಕೆ ತಲುಪಿದ ಪ್ರಿಯಾಂಕಾರನ್ನು ಲಖೀಂಪುರ್ ಖೇರಿಗೆ ಹೋಗುವ ಹಾದಿಯಲ್ಲಿ ಹಲವಾರು ಬಾರಿ ಪೊಲೀಸರು ತಡೆದಿದ್ದರು.SHARE THIS

Author:

0 التعليقات: