Sunday, 3 October 2021

ಬ್ಯಾರಿ ಸಾಹಿತ್ಯ ಅಕಾಡಮಿಯಿಂದ ಬ್ಯಾರಿ ಭಾಷಾ ದಿನಾಚರಣೆ


 ಬ್ಯಾರಿ ಸಾಹಿತ್ಯ ಅಕಾಡಮಿಯಿಂದ ಬ್ಯಾರಿ ಭಾಷಾ ದಿನಾಚರಣೆ

ಮಂಗಳೂರು:  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ಮಂಗಳೂರು ವಿವಿ ಬ್ಯಾರಿ ಅಧ್ಯಯನ ಪೀಠದ ಸಹಯೋಗದೊಂದಿಗೆ ನಗರದ ಹಂಪನಕಟ್ಟೆಯ ಮಂಗಳೂರು ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಬ್ಯಾರಿ ಭಾಷಾ ದಿನಾಚರಣೆ ಕಾರ್ಯಕ್ರಮ ರವಿವಾರ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಸಾವಿರಾರು ಮಂದಿಯ ಹೋರಾಟದ ಫಲವಾಗಿ ಬ್ಯಾರಿ ಅಕಾಡಮಿಯು ಸ್ಥಾಪನೆಗೊಂಡಿದೆ. ಆ ಹೋರಾಟಗಾರರ ಉದ್ದೇಶ ಈಡೇರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಾ ಬಂದಿದ್ದೇನೆ. ನನ್ನ ಅವಧಿಯಲ್ಲಿ ಸಾಕಷ್ಟು ಕೆಲಸ ಕಾರ್ಯಗಳು ಆಗಿದೆ ಎಂಬ ತೃಪ್ತಿಯೂ ಇದೆ. ಇದೀಗ ಬ್ಯಾರಿ ಭಾಷೆಯನ್ನು ಯುನಿಕೋಡ್‌ಗೆ ಅಳವಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದರು.

ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ದುಆಗೈದು, ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪತ್ರಕರ್ತ  ಹಂಝ ಮಲಾರ್ ಬ್ಯಾರಿ ಭಾಷಾ ದಿನಾಚರಣೆಯ ಕುರಿತು ಉಪನ್ಯಾಸ ನೀಡಿದರು. ಮುಖ್ಯ ಅತಿಥಿಯಾಗಿ ಬ್ಯಾರಿ ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯ ಇಬ್ರಾಹಿಂ ಕೋಡಿಜಾಲ್ ಭಾಗವಹಿಸಿ ಮಾತನಾಡಿದರು.

ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಅಬೂಬಕರ್ ಸಿದ್ದೀಕ್, ಅಧ್ಯಯನ ಪೀಠದ ಸಲಹಾ ಸಮಿತಿಯ ಸದಸ್ಯರಾದ ಅಹ್ಮದ್ ಬಾವಾ ಪಡೀಲ್, ಕೆ.ಪಿ. ಅಬ್ದುಲ್ ರಹ್ಮಾನ್ ಕುತ್ತೆತ್ತೂರು, ಅಕಾಡಮಿಯ ಸದಸ್ಯರಾದ ಕಮರುದ್ದೀನ್ ಸಾಲ್ಮರ, ಚಂಚಲಾಕ್ಷಿ, ಸುರೇಖಾ ಉಪಸ್ಥಿತರಿದ್ದರು.

ಅಕಾಡಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ಸದಸ್ಯ ಸಂಶೀರ್ ಬುಡೋಳಿ ಕಾರ್ಯಕ್ರಮ ನಿರೂಪಿಸಿದರು.

ಸಾಧಕರಿಗೆ ಸನ್ಮಾನ: ಬ್ಯಾರಿ ಭಾಷೆ, ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಸಾಧಕರಾದ ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ (ಬ್ಯಾರಿ ಭಾಷಾ ಪ್ರವಚನಕಾರ), ಟಿ.ಎ. ಅಲಿಯಬ್ಬ ಜೋಕಟ್ಟೆ (ಹಿರಿಯ ಬ್ಯಾರಿ ಸಾಹಿತಿ), ಅಬ್ದುಲ್ ಖಾದರ್ ಬುಟ್ಟೊ (ಹಿರಿಯ ಬ್ಯಾರಿ ಭಾಷಾ ಸಂಘಟಕ), ಶಮೀರ್ ಮುಲ್ಕಿ (ಅಧ್ಯಕ್ಷರು, ಬ್ಯಾರಿ ಸಂಗೀತ ಕಲಾವಿದರ ಒಕ್ಕೂಟ ದ,ಕ, ಮತ್ತು ಉಡುಪಿ ಜಿಲ್ಲೆ), ಸಮದ್ ಗಡಿಯಾರ್ (ಬ್ಯಾರಿ ಗಾಯಕ), ಅಶ್ರಫ್ ಸವಣೂರು (ಬ್ಯಾರಿ ಸಾಹಿತಿ ಮತ್ತು ಗಾಯಕ), ಸತ್ತಾರ್ ಗೂಡಿನಬಳಿ ( ಬ್ಯಾರಿ ನಾಟಕ ಕಲಾವಿದ), ಜಿಯಾ ಕಲ್ಲಡ್ಕ (ಬ್ಯಾರಿ ಗಾಯಕ), ರಾಝ್ ಕಲಾಯಿ (ಬ್ಯಾರಿ ಸಾಹಿತ್ಯ), ಇರ್ಫಾನ್ ಬಜಾಲ್ (ಬ್ಯಾರಿ ಸಾಹಿತ್ಯ) ಅವರನ್ನು ಸನ್ಮಾನಿಸಲಾಯಿತು.

ಭಾಷಾ ದಿನಾಚರಣೆಯ ಪ್ರಯುಕ್ತ ನಡೆದ ಬ್ಯಾರಿ ಭಾಷಣ ಮತ್ತು ಆನ್‌ಲೈನ್ ಮೂಲಕ ಏರ್ಪಡಿಸಲಾದ ಬ್ಯಾರಿ ಗಾಯನ ಹಾಗೂ ಬ್ಯಾರಿ ಪ್ರಬಂಧ ವಾಚನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.


SHARE THIS

Author:

0 التعليقات: