ಮುಂಬೈನ ಐಶಾರಾಮಿ ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅನಾಹುತ: ಓರ್ವ ಮೃತ್ಯು, ಅಗ್ನಿಶಾಮಕದಳದಿಂದ ಕಾರ್ಯಾಚರಣೆ
ಮುಂಬೈನ ಲಾಲ್ಬಾಗ್ ಪ್ರದೇಶದ ವಸತಿ ಕಟ್ಟಡದ 19 ನೇ ಮಹಡಿಯಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ಓರ್ವ ಸಾವನ್ನಪ್ಪಿದ್ದಾನೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ನಂತರ ಅಗ್ನಿಶಾಮಕ ದಳದ ಸಹಾಯದಿಂದ ಬೆಂಕಿಯನ್ನು ನಂದಿಸಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಗರದ ಐಷಾರಾಮಿ ಒನ್ ಅವಿಘ್ನ ಪಾರ್ಕ್ ಸೊಸೈಟಿಯಲ್ಲಿ ಈ ಘಟನೆ ನಡೆದಿದೆ.
ತನ್ನ ದೇಹಕ್ಕೆ ಬೆಂಕಿ ಹೊತ್ತಿಕೊಂಡ ವ್ಯಕ್ತಿಯೋರ್ವ 19ನೇ ಮಹಡಿಯಿಂದ ಕೆಳಗೆ ಹಾರುತ್ತಿರುವುದು ವೀಡಿಯೋಗಳಲ್ಲಿ ಸೆರೆಯಾಗಿದೆ. ಈ ಅವಘಡದಿಂದ ಉಂಟಾಗಿದ್ದ ದಟ್ಟವಾದ ಕಪ್ಪು ಹೊಗೆಗಳು ಮೈಲು ದೂರಗಳಿಗೂ ಗೋಚರಿಸುತ್ತಿತ್ತು ಎಂದು ವರದಿಗಳು ತಿಳಿಸಿದೆ. ಅರುಣ್ ತಿವಾರಿ (30) ಎಂಬ ವ್ಯಕ್ತಿಯನ್ನು ಬಳಿಕ ಕೆಇಎಂ ಆಸ್ಪತ್ರೆಗೆ ಕರೆ ತಂದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಮುಂಬೈ ಮೇಯರ್ ಕಿಶೋರಿ ಪೆಡ್ನೆಕರ್ ಮತ್ತು ಇತರ ಹಿರಿಯ ಅಧಿಕಾರಿಗಳು ಘಟನೆಯ ನಂತರ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಸ್ಥಳಕ್ಕೆ ಆಗಮಿಸಿದ್ದಾರೆ.
0 التعليقات: