Saturday, 23 October 2021

ಉತ್ತರ ಪ್ರದೇಶ:ಕಾಂಗ್ರೆಸ್‌ನ ಪ್ರತಿಜ್ಞಾ ಯಾತ್ರೆಗೆ ಇಂದು ಚಾಲನೆ ನೀಡಿದ ಪ್ರಿಯಾಂಕಾ ಗಾಂಧಿ


 ಉತ್ತರ ಪ್ರದೇಶ:ಕಾಂಗ್ರೆಸ್‌ನ ಪ್ರತಿಜ್ಞಾ ಯಾತ್ರೆಗೆ ಇಂದು ಚಾಲನೆ ನೀಡಿದ ಪ್ರಿಯಾಂಕಾ ಗಾಂಧಿ

ಲಕ್ನೋ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ  ಉತ್ತರ ಪ್ರದೇಶದ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮುಂದಿನ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶ ರಾಜ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ಮುನ್ನ ಪಕ್ಷವು ಅಂಗೀಕರಿಸಿದ ವಿವಿಧ ನಿರ್ಣಯಗಳನ್ನು ಜನರಿಗೆ ತಲುಪಿಸಲು ಇಂದು ಬಾರಾಬಂಕಿಯಿಂದ ಮೂರು 'ಪ್ರತಿಜ್ಞಾ ಯಾತ್ರೆ'ಗಳನ್ನು ಆರಂಭಿಸಿದರು.

"ನಮ್ಮ ಪ್ರಣಾಳಿಕೆಯ ಕೆಲವು ಪ್ರಮುಖ ಭರವಸೆಗಳಲ್ಲಿ ಶಾಲಾ ಬಾಲಕಿಯರಿಗೆ ಉಚಿತ ಇ-ಸ್ಕೂಟಿ ಹಾಗೂ  ಮೊಬೈಲ್ ಫೋನ್, ಕೃಷಿ ಸಾಲ ಮನ್ನಾ, ಬಡ ಕುಟುಂಬಗಳಿಗೆ ವರ್ಷಕ್ಕೆ ರೂ. 25,000, ಎಲ್ಲರಿಗೂ ಅರ್ಧದಷ್ಟು ವಿದ್ಯುತ್ ಬಿಲ್ ಹಾಗೂ  ಕೋವಿಡ್ ಅವಧಿಯ ಬಾಕಿ ಉಳಿದಿರುವ ವಿದ್ಯುತ್ ಬಿಲ್‌ಗಳ ಸಂಪೂರ್ಣ ಮನ್ನಾ ಒಳಗೊಂಡಿರುತ್ತದೆ" ಎಂದು ಯಾತ್ರೆಗೆ ಚಾಲನೆ ನೀಡುವಾಗ ಕಾಂಗ್ರೆಸ್ ನಾಯಕಿ ಹೇಳಿದರು.

ಮೂರು ಯಾತ್ರೆಗಳು  ಬರಾಬಂಕಿಯಿಂದ ಬುಂದೇಲ್‌ಖಂಡ್, ಸಹರಾನ್‌ಪುರದಿಂದ ಮಥುರಾ ಹಾಗೂ  ವಾರಣಾಸಿಯಿಂದ ರಾಯ್ ಬರೇಲಿಯವರೆಗೆ  ನವೆಂಬರ್ 1 ರವರೆಗೆ ನಡೆಯಲಿದೆ.

ಮಾಜಿ ಸಂಸದ ಪ್ರಮೋದ್ ತಿವಾರಿ ಅವರು ವಾರಣಾಸಿಯಿಂದ ರಾಯ್ ಬರೇಲಿ ಮಾರ್ಗವಾಗಿ ಅವಧ್ ಪ್ರದೇಶವನ್ನು ತೆರಳುವ ರ್ಯಾಲಿಯ ನೇತೃತ್ವವಹಿಸಲಿದ್ದಾರೆ. ಬಾರಾಬಂಕಿ-ಬುಂದೇಲ್‌ಖಂಡ್ ಮಾರ್ಗವನ್ನು ಪಿ.ಎಲ್. ಪುನಿಯಾ ಹಾಗೂ  ಕೇಂದ್ರದ ಮಾಜಿ ರಾಜ್ಯ ಸಚಿವ ಪ್ರದೀಪ್ ಜೈನ್ ಆದಿತ್ಯ ಮುನ್ನಡೆಸಲಿದ್ದಾರೆ.

ವೆಸ್ಟರ್ನ್ ಫ್ರಂಟ್  ಸಹರಾನ್ಪುರ-ಮಥುರಾ ಮಾರ್ಗವನ್ನು ಒಳಗೊಂಡಿದ್ದು, ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಹಾಗೂ  ಪಕ್ಷದ ಹಿರಿಯ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ನೇತೃತ್ವ ವಹಿಸಲಿದ್ದಾರೆ.

ಯಾತ್ರೆಯು 12,000 ಕಿಲೋಮೀಟರ್‌ಗಳನ್ನು ಕ್ರಮಿಸಲಿದೆ. ಯಾತ್ರೆಯಲ್ಲಿ ವಿವಿಧ ಪತ್ರಿಕಾಗೋಷ್ಠಿಗಳು, ‘ನುಕ್ಕಡ್ ಸಭೆಗಳು’ ದೇವಸ್ಥಾನ ಭೇಟಿಗಳು, ರೋಡ್‌ ಶೋಗಳು, ಜನ ಸಭೆಗಳು ಇತ್ಯಾದಿಗಳನ್ನು ನಡೆಸಲಾಗುತ್ತದೆ.


SHARE THIS

Author:

0 التعليقات: