Thursday, 14 October 2021

ಗಡಿಯಿಂದ ಚೀನಾವನ್ನು ಯಾವಾಗ ಹೊರದಬ್ಬುತ್ತೀರಿ: ಅಮಿತ್ ಶಾಗೆ ಕಾಂಗ್ರೆಸ್ ಪ್ರಶ್ನೆ


ಗಡಿಯಿಂದ ಚೀನಾವನ್ನು ಯಾವಾಗ ಹೊರದಬ್ಬುತ್ತೀರಿ: ಅಮಿತ್ ಶಾಗೆ ಕಾಂಗ್ರೆಸ್ ಪ್ರಶ್ನೆ

ನವದೆಹಲಿ: ಗಡಿ ಭಾಗಗಳಲ್ಲಿ ಭಾರತದ ಭೂ ಪ್ರದೇಶಗಳಿಂದ ಚೀನಾವನ್ನು ಯಾವಾಗ ಹೊರದಬ್ಬುತ್ತೀರಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕಾಂಗ್ರೆಸ್ ಪ್ರಶ್ನಿಸಿದೆ.

ದೇಶದ ಬಾಹ್ಯ ಮತ್ತು ಆಂತರಿಕ ಭದ್ರತೆಯ ವಿಚಾರದಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ಸುಮ್ಮನೇ ಎದೆ ತಟ್ಟಿಕೊಳ್ಳುವ ಅಮಿತ್ ಶಾ ಅವರು ದೇಶದ ಬದಲು ಬಾಹ್ಯ ಮತ್ತು ಆಂತರಿಕ ಭದ್ರತೆಯ ಬಗ್ಗೆ ಗಮನಹರಿಸಲಿ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲ ಹೇಳಿದ್ದಾರೆ.

ಐದು ವರ್ಷಗಳ ಹಿಂದೆ ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಕೈಗೊಳ್ಳುವ ಮೂಲಕ ತನ್ನ ಗಡಿಯಲ್ಲಿ ಯಾರೂ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಜಗತ್ತಿಗೆ ಪ್ರಬಲವಾದ ಸಂದೇಶವನ್ನು ಭಾರತ ರವಾನಿಸಿದೆ ಎಂದು ಅಮಿತ್ ಶಾ ಗೋವಾದ ಪಣಜಿಯಲ್ಲಿ ಹೇಳಿದ್ದರು.

'ಅಮಿತ್ ಶಾ ಅವರು ಮೊದಲು ಚೀನಾದ ಹೆಸರು ಉಚ್ಚರಿಸಲಿ. ಆ ದೇಶದ ಬಗ್ಗೆ ಮೋದಿ ಸರ್ಕಾರಕ್ಕೆ ಹೆದರಿಕೆ ಇದೆ. ಚೀನಾ ಹೆಸರೆತ್ತಿದ ಬಳಿಕ ಆ ದೇಶದ ಯೋಧರನ್ನು ನಮ್ಮ ಭೂ ಪ್ರದೇಶಗಳಿಂದ ಯಾವಾಗ ಹೊರಗೆ ಕಳುಹಿಸುತ್ತೀರಿ ಎಂಬುದನ್ನು ತಿಳಿಸಲಿ. ಚೀನಾ ಸೇನೆಯು ತನ್ನ ಲಜ್ಜೆಗೆಟ್ಟ ನಡೆಯಿಂದ ಆತಿಕ್ರಮಿಸಿಕೊಂಡಿರುವ ನಮ್ಮ 900 ಕಿಲೋಮೀಟರ್ ಭೂ ಪ್ರದೇಶವನ್ನು ಮರಳಿ ಪಡೆಯಲು ಅವರು ಗಡುವು ವಿಧಿಸಿಕೊಳ್ಳಲಿ' ಎಂದು ಸುರ್ಜೇವಾಲ ಹೇಳಿದ್ದಾರೆ.SHARE THIS

Author:

0 التعليقات: