Wednesday, 27 October 2021

ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಟ್ವೀಟ್: ಸಿ.ಟಿ.ರವಿ ವಿರುದ್ಧ ಆಕ್ರೋಶ


 ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಟ್ವೀಟ್: ಸಿ.ಟಿ.ರವಿ ವಿರುದ್ಧ ಆಕ್ರೋಶ

ಬೆಂಗಳೂರು: ‘ಕಂಬಳಿ ಹಾಕಲು ಕುರುಬ ಜಾತಿಯವರೆ ಆಗಬೇಕು ಅನ್ನುವ ನಿಮ್ಮ ವಾದದ ಪ್ರಕಾರ ಈ ‘ಟೊಪ್ಪಿ' ಹಾಕಲು ಯಾರಿಗೆ ಹುಟ್ಟಿರಬೇಕು ಮಾಜಿ ಮುಖ್ಯಮಂತ್ರಿಗಳೆ?' ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಪ್ರತಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯರ ವಿರುದ್ಧದ ಟ್ವೀಟ್ ಮಾಡಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಬುಧವಾರ ಹಾನಗಲ್ ಮತ್ತು ಸಿಂದಗಿ ಕ್ಷೇತ್ರಗಳ ಉಪಚುನಾವಣೆ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನ ಸಿ.ಟಿ.ರವಿ ಟ್ವಿಟರ್ ಮೂಲಕ ಸಿದ್ದರಾಮಯ್ಯ ಮುಸ್ಲಿಮರ ಪ್ರಾರ್ಥನೆಯೊಂದರಲ್ಲಿ ಪಾಲ್ಗೊಂಡಿದ್ದ ಫೋಟೋ ಶೇರ್ ಮಾಡಿದ್ದು ಫೇಸ್‍ಬುಕ್, ಟ್ವಿಟ್ಟರ್ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಮಾತ್ರವಲ್ಲ, `ನಿಮ್ಮ ರಾಜಕೀಯಕ್ಕಾಗಿ ಕೀಳುಮಟ್ಟದ ಪದ ಬಳಕೆ ಕಪ್ಪುಚುಕ್ಕೆ' ಎಂದು ನೆಟ್ಟಿಗರು ರವಿ ವಿರುದ್ಧ ಕಿಡಿಕಾರಿದ್ದಾರೆ.

ಈ ಮಧ್ಯೆ ಸಿ.ಟಿ.ರವಿ ಟ್ವೀಟ್‍ಗೆ ವಿಜಯಪುರದಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ‘ನಾನು ಕಂಬಳಿ ಹಾಕಿಕೊಳ್ಳುತ್ತೇನೆ, ಮುಸ್ಲಿಮರ ಟೋಪಿಯನ್ನು ಧರಿಸುತ್ತೇನೆ, ಕ್ರೈಸ್ತರ ಟೋಪಿಯನ್ನೂ ಧರಿಸುತ್ತೇನೆ, ಹಿಂದೂಗಳ ಟೋಪಿಯನ್ನು ಹಾಕಿಕೊಳ್ಳುತ್ತೇನೆ, ಇಲ್ಲವೆ ಗಾಂಧಿ ಟೋಪಿಯನ್ನಾದರೂ ಧರಿಸುತ್ತೇನೆ, ನನ್ನ ಪ್ರಶ್ನಿಸಲು ಸಿ.ಟಿ.ರವಿ ಯಾರು' ಎಂದು ಖಾರವಾಗಿ ಪ್ರಶ್ನಿಸಿದರು.

ಅಲ್ಲದೆ, ಹಲವು ಮಂದಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಕೇಂದ್ರ ಸಚಿವ ರಾಜನಾಥ ಸಿಂಗ್, ಪ್ರಧಾನಿ ನರೇಂದ್ರ ಮೋದಿ ಅವರು ಮುಸ್ಲಿಂ ಟೋಪಿ ಧರಿಸಿರುವ ಚಿತ್ರಗಳನ್ನು ಟ್ಯಾಗ್ ಮಾಡಿ, ‘ಇವರು ಯಾರಿಗೆ ಹುಟ್ಟಿದ್ದು ಹೇಳಿ’ ಎಂದು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.

ಆಕ್ಷೇಪ: ‘ಸಿ.ಟಿ.ರವಿಯವರೇ, ನಿಮ್ಮ ರಾಜಕೀಯ ಏನೇ ಇರಲಿ, ನಿಮ್ಮ ಪದ ಬಳಕೆ ಇಷ್ಟೊಂದು ಕೀಳುಮಟ್ಟವೇ? ನಿಮ್ಮಂತಹವರು ರಾಜಕಾರಣಕ್ಕೆ ಕಪ್ಪು ಚುಕ್ಕೆ. ನಿಮ್ಮ ನಡವಳಿಕೆಗೆ ನಾಚಿಕೆಯಾಗಬೇಕು. ರಾಜಕೀಯ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯ ಏನೇ ಇರಲಿ ಸಂಸ್ಕಾರಯುತ ಬಾಂಧವ್ಯ ಈ ರೀತಿ ಇರಲಿ’ ಎಂದು ಸಿ.ಟಿ.ರವಿಗೆ ಸಲಹೆ ನೀಡಿದ್ದಾರೆ.


SHARE THIS

Author:

0 التعليقات: