Tuesday, 12 October 2021

ಯಡಿಯೂರಪ್ಪ ಬೆಂಬಲಿಗರ ಮೇಲೆ ಐಟಿ ದಾಳಿಗೆ ಸಿದ್ದರಾಮಯ್ಯ ಕಾರಣ: ಕುಮಾರಸ್ವಾಮಿ

 ಯಡಿಯೂರಪ್ಪ ಬೆಂಬಲಿಗರ ಮೇಲೆ ಐಟಿ ದಾಳಿಗೆ ಸಿದ್ದರಾಮಯ್ಯ ಕಾರಣ: ಕುಮಾರಸ್ವಾಮಿ

ಮೈಸೂರು: ಬಿ.ಎಸ್.ಯಡಿಯೂರಪ್ಪ ಬೆಂಬಲಿಗರ ಮೇಲೆ ಐಟಿ ದಾಳಿಗೆ ಸಿದ್ದರಾಮಯ್ಯನವರೇ ನೇರ ಕಾರಣ. ಅವರು ಯಡಿಯೂರಪ್ಪರನ್ನು ಭೇಟಿ ಮಾಡಿದ್ದೆ ಈ ದಾಳಿಗೆ ಕಾರಣ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿಯೇ ಆಡಳಿತದಲ್ಲಿದೆ. ಇವರಿಗೆ ಗುಪ್ತಚರ ಇಲಾಖೆ ಮಾಹಿತಿ ಇರುವುದಿಲ್ಲವೇ? ರಾಜಕೀಯದ ಬಗ್ಗೆ ಸಾಮಾನ್ಯ ಜ್ಞಾನ ಇರುವವನಿಗೂ ಗೊತ್ತು ಯಡಿಯೂರಪ್ಪರನ್ನು ಹಿಡಿದಿಟ್ಟುಕೊಳ್ಳಲು ಈ ದಾಳಿ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ನಗರದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಸಂಘಟನೆಗೆ ಮಂಗಳವಾರ ಮೈಸೂರಿಗೆ ಆಗಮಿಸಿದ ಕುಮಾರಸ್ವಾಮಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ಅಧಿಕಾರಕ್ಕಾಗಿ ಸಿದ್ದರಾಮಯ್ಯ ಏನು ಬೇಕಾದರೂ ಮಾಡುತ್ತಾರೆ.  ಪುಟ್ಟಗೋಸಿ ವಿರೋಧ ಪಕ್ಷದ ಸ್ಥಾನ ಪಡೆಯಲಿಕ್ಕಾಗಿ 23 ಮಂದಿ ಕಾಂಗ್ರೆಸ್ ಮಂತ್ರಿಗಳ ಹೊಟ್ಟೆಮೇಲೆ ಹೊಡೆದರು. ಇವರಿಗೆ ಕನಸು ಮನಸ್ಸಿನಲ್ಲೂ ನಾನೆ ಕಾಣಿಸುತ್ತಿದ್ದೇನೆ ಎಂದು ಸಿದ್ದರಾಮಯ್ಯ ವಿರುದ್ಧ ಏಕ ವಚನದಲ್ಲೇ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಅವರಿಗೆ ಬೇಕಿರುವುದು ಅಧಿಕಾರ ಅದಕ್ಕಾಗಿಯೇ ಅವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಗೆ ಹೋದರೂ, ಈಗಲೂ ಅಧಿಕಾರಕ್ಕಾಗಿ ಏನೂ ಬೇಕಾದರೂ ಮಾಡುತ್ತಾರೆ ಎಂದು ಆರೋಪಿಸಿದರು.

ಜೆಡಿಎಸ್ ಪಕ್ಷವನ್ನು ಬಿಜೆಪಿ ಬಿ ಟೀಂ ಎಂದು 2018 ರ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದೇ ಸಿದ್ದರಾಮಯ್ಯ, ಒಬ್ಬ ಮುಖ್ಯಮಂತ್ರಿಯಾಗಿದ್ದವರು 26 ಸಾವಿರಕ್ಕೂ ಹೆಚ್ಚು ಮತಗಳಿಂದ ಸೋಲುತ್ತಾರೆ ಎಂದರೆ ಜೆಡಿಎಸ್ ಪಕ್ಷವು ಕಾರಣ, ಇನ್ನು ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಿನ ಬಗ್ಗೆ ಇವರೇನು ಮಾತನಾಡುವುದು ಎಂದು ಪ್ರಶ್ನಿಸಿದರು.

ಸಿಂದಗಿ ಮತ್ತು ಹಾನಗಲ್ ನಲ್ಲಿ ಅಲ್ಪಸಂಖ್ಯಾರಿಗೆ ಟಿಕೆಟ್ ಕೊಡಲಾಗಿದೆ. ಯಾವ ದೊಣ್ಣೆನಾಯಕನ ಅಪ್ಪಣೆ ಪಡೆದು ನಾನು ಟಿಕೆಟ್ ನೀಡಬೇಕಿಲ್ಲ.‌ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ. ಇಲ್ಲೇನಿದ್ದರೂ ಜೆಡಿಎಸ್ ಮತ್ತು ಬಿಜೆಪಿ ನಡುವೆ ಫೈಟ್ ಎಂದು ಹೇಳಿದರು.


SHARE THIS

Author:

0 التعليقات: