ಲಂಚ ಆರೋಪ, ಸಾಕ್ಷಿ ಹೇಳಿಕೆಗೂ ನನಗೂ ಯಾವುದೇ ಸಂಬಂಧ ಇಲ್ಲ: ಆರ್ಯನ್ ಖಾನ್
ಹೊಸದಿಲ್ಲಿ: ಪ್ರಯಾಣಿಕ ಹಡಗಿನಲ್ಲಿ ಮಾದಕ ದ್ರವ್ಯ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ತನ್ನ ಹಾಗೂ ಇತರರ ವಿರುದ್ಧ ತನಿಖೆ ನಡೆಸುತ್ತಿರುವ ಎನ್ಸಿಬಿಯ ಮುಖ್ಯ ಅಧಿಕಾರಿ ಸಮೀರ್ ವಾಂಖೆಡೆ ಅವರ ಮೇಲಿನ ಆರೋಪಕ್ಕೂ ತನಗೂ ಯಾವುದೇ ಸಂಬಂಧ ಇಲ್ಲ ಎಂದು ಪ್ರಕರಣದ ಆರೋಪಿ ಆರ್ಯನ್ ಖಾನ್ ಹೇಳಿದ್ದಾರೆ. ಅಲ್ಲದೆ, ಎನ್ಸಿಬಿ ಅಧಿಕಾರಿಗಳೊಂದಿಗೆ ಯಾವುದೇ ಒಪ್ಪಂದವನ್ನು ಅವರು ನಿರಾಕರಿಸಿದ್ದಾರೆ.
‘‘ಪ್ರಸಕ್ತ ಸಾರ್ವಜನಿಕ/ಸಾಮಾಜಿಕ ಮಾಧ್ಯಮದಲ್ಲಿ ಸಮೀರ್ ವಾಂಖೆಡೆ ಹಾಗೂ ನಿರ್ದಿಷ್ಟ ರಾಜಕೀಯ ವ್ಯಕ್ತಿಗಳ ನಡುವಿನ ಆರೋಪ, ಪ್ರತ್ಯಾರೋಪಗಳಿಗೂ ನನಗೂ ಯಾವುದೇ ಸಂಬಂಧ ಇಲ್ಲ. ಅಲ್ಲದೆ, ಪ್ರಭಾಕರ್ ಸೈಲ್ ಅಥವಾ ಕೆ.ಪಿ. ಗೋಸಾವಿ ಅವರ ಬಗ್ಗೆ ಯಾವುದೇ ರೀತಿಯ ಕಾಳಜಿ ಆಗಲಿ, ಸಂಬಂಧ ಆಗಲಿ ಇಲ್ಲ’’ ಎಂದು ಬಾಂಬೆ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡಾವಿಟ್ ನಲ್ಲಿ ಆರ್ಯನ್ ಖಾನ್ ತಿಳಿಸಿದ್ದಾರೆ.
ಆರ್ಯನ್ ಖಾನ್ ಹೇಳಿಕೆ ಅನುಸರಿಸಿ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡಾವಿಟ್ ನಲ್ಲಿ ಎನ್ಸಿಬಿ, ಲಂಚದ ಆರೋಪ ಮಾಡುವಂತೆ ಸ್ವತಂತ್ರ ಸಾಕ್ಷಿಯಾಗಿರುವ ಪ್ರಭಾಕರ್ ಸೈಲ್ಗೆ ಆರ್ಯನ್ ಖಾನ್ ಅವರ ತಂದೆ ಶಾರುಕ್ ಖಾನ್ ಮ್ಯಾನೇಜರ್ ಪ್ರಭಾವ ಬೀರಿದಂತೆ ಕಾಣುತ್ತದೆ ಎಂದು ಪ್ರತಿಪಾದಿಸಿದೆ.
0 التعليقات: