Tuesday, 26 October 2021

ಅಮರೀಂದರ್ ಸಿಂಗ್ ಹೊಸ ಪಕ್ಷಕ್ಕೆ ಇಂದು ಚಾಲನೆ


ಅಮರೀಂದರ್ ಸಿಂಗ್ ಹೊಸ ಪಕ್ಷಕ್ಕೆ ಇಂದು ಚಾಲನೆ

ಅಮೃತಸರ: ಪಕ್ಷದ ಹೈಕಮಾಂಡ್‌ನಿಂದ ಅವಮಾನಿತರಾಗಿ’ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಬುಧವಾರ ತಮ್ಮ ಹೊಸ ಪಕ್ಷಕ್ಕೆ ಚಾಲನೆ ನೀಡುವ ನಿರೀಕ್ಷೆ ಇದೆ. 'ಪಂಜಾಬ್ ಲೋಕ ಕಾಂಗ್ರೆಸ್' ಹೆಸರಿನಲ್ಲಿ ಹೊಸ ಪಕ್ಷ ಅಸ್ತಿತ್ವಕ್ಕೆ ಬರಲಿದೆ ಎಂದು ಬೆಳವಣಿಗೆಗಳ ಬಗ್ಗೆ ಮಾಹಿತಿ ಹೊಂದಿರುವ ಮೂಲಗಳು ಪ್ರಕಟಿಸಿವೆ.

ಎರಡು ಬಾರಿ ಪಂಜಾಬ್ ಸಿಎಂ ಆಗಿದ್ದ ಅಮರೀಂದರ್ ಸಿಂಗ್ ಬುಧವಾರ ಕರೆದಿರುವ ಸುದ್ದಿಗೋಷ್ಠಿಯಲ್ಲಿ ಹೊಸ ಪಕ್ಷವನ್ನು ಘೋಷಿಸಲಿದ್ದಾರೆ ಎಂದು ತಿಳಿದುಬಂದಿದೆ. "ಈ ಸಮಾರಂಭವನ್ನು ಅವರ ಫೇಸ್‌ಬುಕ್ ಪೇಜ್‌ನಲ್ಲಿ ನೇರ ಪ್ರಸಾರ ಮಾಡಲಾಗುವುದು. ಇದಕ್ಕೆ ಟ್ಯೂನ್ ಇನ್ ಆಗಿ" ಎಂದು ಸಿಂಗ್ ಅವರ ಮಾಧ್ಯಮ ಸಲಹೆಗಾರ ರವೀನ್ ತುಕ್ರಲ್ ಟ್ವೀಟ್ ಮಾಡಿದ್ದಾರೆ. ಸಮಾರಂಭಕ್ಕೆ ಮಾಧ್ಯಮಗಳನ್ನು ಆಹ್ವಾನಿಸಿದ್ದಾರೆ.

ಅಕ್ಟೋಬರ್ 19ರಂದು ಅಮರೀಂದರ್ ಸಿಂಗ್ ಹೊಸ ಪಕ್ಷದ ಘೋಷಣೆ ಮಾಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಜತೆಗೆ ರೈತರ ಸಮಸ್ಯೆ ಬಗೆಹರಿದಲ್ಲಿ ಬಿಜೆಪಿ ಜತೆ ಮೈತ್ರಿಯನ್ನೂ ಘೋಷಣೆ ಮಾಡಲಿದ್ದಾರೆ ಎಂದು ತುಕ್ರಲ್ ಹೇಳಿದ್ದರು.

ಕೇಂದ್ರ ಸರ್ಕಾರ ಮತ್ತು ರೈತ ಗುಂಪುಗಳ ನಡುವೆ ಮಾತುಕತೆಗೆ ಮಧ್ಯಸ್ಥಿಕೆ ವಹಿಸಿ ವಿವಾದಾತ್ಮಕ ಕೃಷಿ ಕಾನೂನು ವಿರುದ್ಧದ ಪ್ರತಿಭಟನೆ ಅಂತ್ಯಗೊಳಿಸಲು ಪ್ರಯತ್ನಿಸಲಿದ್ದಾರೆ ಎಂಬ ವರದಿಗಳು ಕೇಳಿಬಂದಿದ್ದವು. ಆದರೆ 40 ಕೃಷಿಕ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ ಇದನ್ನು ನಿರಾಕರಿಸಿತ್ತು.

ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜ್ಯೋತ್ ಸಿಂಗ್ ಸಿಧು ಜತೆಗಿನ ಸಂಘರ್ಷದ ಬಳಿಕ ಸಿಂಗ್ ಸೆಪ್ಟಂಬರ್ 18ರಂದು ಪಂಜಾಬ್ ಸಿಎಂ ಹುದ್ದೆಗೆ ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ್ದರು. ಬಳಿಕ ಕಾಂಗ್ರೆಸ್ ಹೈಕಮಾಂಡ್, ಸಿಕ್ಖ್-ದಲಿತ ಮುಖಂಡ ಚರಣಜೀತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಚರ್ಚಿಸಿದ ಬಳಿಕ ಅಮರೀಂದರ್ ಸಿಂಗ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.



SHARE THIS

Author:

0 التعليقات: