Saturday, 23 October 2021

ಮಡಿಕೇರಿ: ತಿಮಿಂಗಿಲ ವಾಂತಿ ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ


 ಮಡಿಕೇರಿ: ತಿಮಿಂಗಿಲ ವಾಂತಿ ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ

ಮಡಿಕೇರಿ: ಮಾರುತಿ ವ್ಯಾನ್‍ ವೊಂದರಲ್ಲಿ  6 ಕೆ.ಜಿ ತಿಮಿಂಗಿಲ ವಾಂತಿಯನ್ನು(ಅಂಬರ್ ಗ್ರೀಸ್) ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಡಿಕೇರಿ ಮತ್ತು ಸೋಮವಾರಪೇಟೆ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಮಾಲು ಸಹಿತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸೋಮವಾರಪೇಟೆಯ ಎಂ.ಯು. ಕರೀಂ ಬೇಗ್ ಮತ್ತು ಅಬ್ದುಲ್ ಶರೀಫ್ ಎಂಬವರೇ ಬಂಧಿತ ಆರೋಪಿಗಳಾಗಿದ್ದಾರೆ. 

ಅ.13ರಂದು ಸೋಮವಾರಪೇಟೆಯ ಆರೋಪಿಗಳು ಮಕ್ಕಂದೂರು ಮಾರ್ಗವಾಗಿ ಮಡಿಕೇರಿ ಕಡೆಗೆ ಮಾರುತಿ ವ್ಯಾನ್‍ನಲ್ಲಿ(ಕೆ.ಎ.12-ಎಂ.2442) 6 ಕೆ.ಜಿ ತಿಮಿಂಗಲ ವಾಂತಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದರು. ಈ ವೇಳೆ ದಾಳಿ ನಡೆಸಿದ ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಗಳನ್ನು ಸ್ಥಳದಲ್ಲೇ ಬಂಧಿಸಿದ್ದರು. ಬಳಿಕ ಆರೋಪಿಗಳನ್ನು ವಿಚಾರಣೆ ನಡೆಸಿದ ಸಂದರ್ಭ ತಿಮಿಂಗಲ ವಾಂತಿಯನ್ನು ಮಾರಾಟ ಮಾಡುವ ಸಲುವಾಗಿ ಮಡಿಕೇರಿ ಕಡೆಗೆ ಸಾಗಿಸುತ್ತಿರುವುದಾಗಿ ಹೇಳಿಕೆ ನೀಡಿದ್ದರು. ತದನಂತರ ಕೃತ್ಯಕ್ಕೆ ಬಳಸಿದ್ದ ಮಾರುತಿ ವ್ಯಾನ್ ಸಹಿತ 6 ಕೆ.ಜಿಯ ಎರಡು ತುಂಡು ತಿಮಿಂಗಲ ವಾಂತಿಯ ಗಟ್ಟಿಯನ್ನು ವಶಕ್ಕೆ ಪಡೆಯಲಾಗಿತ್ತು.

ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಮಹಾನಿರೀಕ್ಷಕ ಕೆ.ವಿ ಶರತ್ ಚಂದ್ರ ನಿರ್ದೇಶನದ ಮೇರೆಗೆ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ವರಿಷ್ಠಾಧಿಕಾರಿ ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಮಡಿಕೇರಿ ಪಿಎಸ್‍ಐ ಸವಿ, ಸೋಮವಾರಪೇಟೆ ಪಿಎಸ್‍ಐ ಅಪ್ಪಾಜಿ, ಸಿಬ್ಬಂದಿಗಳಾದ ಶೇಖರ್, ರಾಜೇಶ್, ರಾಘವೇಂದ್ರ, ಯೋಗೇಶ್, ಮೋಹನ್, ಚಂಗಪ್ಪ, ಗಣೇಶ್ ಅವರುಗಳು ಕಾರ್ಯಾಚರಣೆ ನಡೆಸಿದ್ದರು.


SHARE THIS

Author:

0 التعليقات: