ಗೋಡ್ಸೆ ಝಿಂದಾಬಾದ್ ಎನ್ನುವವರು ದೇಶಕ್ಕೆ ಅಪಮಾನವೆಸಗುತ್ತಿದ್ದಾರೆ: ಬಿಜೆಪಿ ಸಂಸದ ವರುಣ್ ಗಾಂಧಿ ಆಕ್ರೋಶ

ಹೊಸದಿಲ್ಲಿ: ರಾಷ್ಟ್ರಪಿತ, ಭಾರತದ ಸ್ವಾತಂತ್ರ್ಯ ಹೋರಾಟದ ರೂವಾರಿ ಮಹಾತ್ಮಾ ಗಾಂಧಿಯ ಜನ್ಮದಿನದಂದು ಟ್ವಿಟರ್ ನಲ್ಲಿ ನಾಥೂರಾಮ್ ಗೋಡ್ಸೆ ಝಿಂದಾಬಾದ್ ಎಂಬ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದ್ದು, ಈ ಬಗ್ಗೆ ಬಿಜೆಪಿ ಸಂಸದ ವರುಣ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಾಂಧೀಜಿಯ ಜನ್ಮದಿನದಂದು ಗೋಡ್ಸೆಯನ್ನು ವೈಭವೀಕರಿಸುತ್ತಿರುವವರು ದೇಶಕ್ಕೆ ಅಪಮಾನವೆಸಗುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.
"ಭಾರತವು ಯಾವತ್ತೂ ಆಧ್ಯಾತ್ಮಿಕತೆಯ ಮಹಾಶಕ್ತಿಯಾಗಿದೆ. ತಮ್ಮ ಆಸ್ತಿತ್ವದ ಮೂಲಕ ಮಹಾತ್ಮಾ ಗಾಂಧಿ ದೇಶದ ಆಧ್ಯಾತ್ಮಿಕ ರೇಖೆಗಳನ್ನು ಅಭಿವ್ಯಕ್ತಿಗೊಳಿಸಿದರು. ಇಂದಿಗೂ ಆಧ್ಯಾತ್ಮಿಕತೆಯ ಮಹಾಶಕ್ತಿಯಾಗಿಯೇ ಉಳಿಯುವಂತಹ ನೈತಿಕ ಅಧಿಕಾರವನ್ನು ಮಹಾತ್ಮ ನಮಗೆ ನೀಡಿದ್ದಾರೆ. ಗೋಡ್ಸೆ ಝಿಂದಾಬಾದ್ ಎಂದು ಟ್ವೀಟ್ ಮಾಡುವವರು ದೇಶವನ್ನು ಬೇಜವಾಬ್ದಾರಿಯುತವಾಗಿ ಅಪಮಾನಕ್ಕೀಡು ಮಾಡುತ್ತಿದ್ದಾರೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.
ಮಹಾತ್ಮಾ ಗಾಂಧಿಯವರ ಜನ್ಮದಿನದಂದು ಟ್ವಿಟರ್ ನ ಅಗ್ರ ಟ್ರೆಂಡ್ ಗಳಲ್ಲಿ ಗೋಡ್ಸೆ ಝಿಂದಾಬಾದ್ ಕೂಡಾ ಒಂದಾಗಿತ್ತು. ಹಲವು ಬಲಪಂಥೀಯರು ಗಾಂಧಿಯನ್ನು ಕೊಂದದ್ದಕ್ಕೆ ಗೋಡ್ಸೆಗೆ ಧನ್ಯವಾದ ತಿಳಿಸುವ ಮೂಲಕ ಉದ್ಧಟತನ ಮೆರೆದಿರುವುದು ಸದ್ಯ ವಿವಾದಕ್ಕೀಡಾಗಿದೆ.
0 التعليقات: