Tuesday, 26 October 2021

ದಿಶಾ ರವಿ 'ಟೂಲ್ ಕಿಟ್' ಪ್ರಕರಣ: ಪೊಲೀಸರಿಗೆ ಯಾವುದೇ ಮಾಹಿತಿ ಒದಗಿಸದ ಗೂಗಲ್, ಝೂಮ್

 ದಿಶಾ ರವಿ 'ಟೂಲ್ ಕಿಟ್' ಪ್ರಕರಣ: ಪೊಲೀಸರಿಗೆ ಯಾವುದೇ ಮಾಹಿತಿ ಒದಗಿಸದ ಗೂಗಲ್, ಝೂಮ್

ಹೊಸದಿಲ್ಲಿ: ರೈತರ ಪ್ರತಿಭಟನೆಗಳಿಗೆ ಸಂಬಂಧಿಸಿದ ಟೂಲ್ ಕಿಟ್ ಪ್ರಕರಣದಲ್ಲಿ ಬಂಧಿತರಾಗಿ ನಂತರ ಬಿಡುಗಡೆಯಾಗಿದ್ದ ಪರಿಸರ ಹೋರಾಟಗಾರ್ತಿ ದಿಶಾ ರವಿ ಪ್ರಕರಣದ ತನಿಖೆಗೆ ದೊಡ್ಡ ತೊಡಕೊಂದು ಎದುರಾಗಿದೆ. ತನಿಖಾ ಏಜನ್ಸಿಗಳು ಕೋರಿದ ಮಾಹಿತಿಯನ್ನು ಗೂಗಲ್ ಅಥವಾ ಝೂಮ್ ಒದಗಿಸಿಲ್ಲದೇ ಇರುವುದೇ ಸಮಸ್ಯೆಗೆ ಕಾರಣವಾಗಿದೆ ಎಂದು indianexpress.com ವರದಿ ಮಾಡಿದೆ.

ಇದೇ ಕಾರಣದಿಂದ  ದೇಶದ್ರೋಹ, ಕ್ರಿಮಿನಲ್ ಸಂಚು ಆರೋಪದಡಿ ಐಪಿಸಿ ಅನ್ವಯ ಪ್ರಕರಣ ಎದುರಿಸುತ್ತಿರುವ ದಿಶಾ ಅವರ ವಿರುದ್ಧ ಪೊಲೀಸರು ಚಾರ್ಜ್‍ಶೀಟ್ ಸಲ್ಲಿಸದೇ ಇರುವ ಸಾಧ್ಯತೆಯಿದೆ.  ಈ ಹಿನ್ನೆಲೆಯಲ್ಲಿ ಪ್ರಕರಣ ಮುಚ್ಚುವ  ವರದಿಯನ್ನೂ ಪೊಲೀಸರು ಸಲ್ಲಿಸಬಹುದು.

ರೈತರ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಗೂಗಲ್ ದಾಖಲೆಯ  ರೂಪದಲ್ಲಿ ಟೂಲ್ ಕಿಟ್ ಅನ್ನು ಹಂಚಿದ ಆರೋಪದಡಿ ಅವರನ್ನು ಪ್ರಮುಖ ಆರೋಪಿಯೆಂದು ಹೆಸರಿಸಲಾಗಿತ್ತು. ಈ ಟೂಲ್ ಕಿಟ್ ಅನ್ನು ಸ್ವೀಡನ್‍ನ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ಕೂಡ  ಶೇರ್ ಮಾಡಿದ್ದು ಭಾರೀ ಸುದ್ದಿಯಾಗಿತ್ತು. ಮುಂಬೈ ಮೂಲದ ವಕೀಲೆ ನಿಕಿತಾ ಜೇಕಬ್ ಮತ್ತು ಇಂಜಿನಿಯರ್ ಶಂತನು ಎಂಬವರು ದಿಶಾಗೆ ಟೂಲ್ ಕಿಟ್ ಎಡಿಟ್ ಮಾಡಲು ಸಹಾಯ ಮಾಡಿದ್ದರೆಂದೂ ಆರೋಪಿಸಲಾಗಿತ್ತು.

ತನಿಖಾಧಿಕಾರಿಗಳು ಅಮೆರಿಕಾದ ಝೂಮ್ ಸಂಸ್ಥೆಗೆ ಫೆಬ್ರವರಿಯಲ್ಲಿಯೇ ಮಾಹಿತಿ ಕೋರಿದ್ದರೂ ಯಾವುದೇ ಮಾಹಿತಿ ದೊರಕಿಲ್ಲ.

ಜನವರಿ 26ರಂದು ನಡೆದ ಕೆಂಪು ಕೋಟೆ ಹಿಂಸಾಚಾರ ಪ್ರಕರಣಕ್ಕಿಂತ ಮುನ್ನ ದಿಶಾ ಮತ್ತು ನಿಕಿತಾ ಅವರು ಕೆನಡಾದ ಪಿಎಫ್‍ಜೆ ಸಂಸ್ಥೆಯ ಮೋ ಧಲಿವಾಲ್ ಜತೆ ಝೂಮ್ ಕಾಲ್ ನಡೆಸಿದ್ದರು ಎಂದು ಆರೋಪಿಸಲಾಗಿತ್ತು.

ಈ ನಡುವೆ ಗೂಗಲ್‍ನಿಂದ ಮಾಹಿತಿ ಕೋರಿದ್ದರೂ ಯಾವುದೇ ಮಾಹಿತಿ ದೊರಕಿಲ್ಲ ಎಂದು indianexpress.com ವರದಿ ಮಾಡಿದೆ.

ಫೆಬ್ರವರಿ 13 ರಂದು ದಿಶಾ ಅವರನ್ನು ಬಂಧಿಸಲಾಗಿದ್ದರೆ ಫೆಬ್ರವರಿ 23ರಂದು ಅವರಿಗೆ ಜಾಮೀನು ದೊರಕಿತ್ತು.


SHARE THIS

Author:

0 التعليقات: