Saturday, 2 October 2021

ಸಿದ್ದರಾಮಯ್ಯ ಅವರನ್ನು ಕೇಳಿ ನಾನು ಅಭ್ಯರ್ಥಿ ಕಣಕ್ಕಿಳಿಸಬೇಕಾ?: ಎಚ್.ಡಿ.ಕುಮಾರಸ್ವಾಮಿ ಪ್ರಶ್ನೆ

ಸಿದ್ದರಾಮಯ್ಯ ಅವರನ್ನು ಕೇಳಿ ನಾನು ಅಭ್ಯರ್ಥಿ ಕಣಕ್ಕಿಳಿಸಬೇಕಾ?: ಎಚ್.ಡಿ.ಕುಮಾರಸ್ವಾಮಿ ಪ್ರಶ್ನೆ

ಬೆಂಗಳೂರು: ಹಾನಗಲ್ ಹಾಗೂ ಸಿಂಧಗಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ಯಾರನ್ನೂ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಬೇಕು ಎಂಬುದರ ಕುರಿತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಕೇಳಬೇಕೇ? ನಮ್ಮ ಪಕ್ಷದ ವಿಚಾರದಲ್ಲಿ ಮೂಗು ತೂರಿಸಲು ಅವರಿಗೇನು ಅಧಿಕಾರವಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿಡಿಗಾರಿದರು.

ಶನಿವಾರ ನಗರದ ಶೇಷಾದ್ರಿಪುರಂನಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ದೊಣ್ಣೆ ನಾಯಕನ್ನು ಕೇಳಿ ನಾವು ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕೆ? ಕಾಂಗ್ರೆಸ್, ಬಿಜೆಪಿಗಿಂತ ಮುಂಚೆ ನಾವು ಅಭ್ಯರ್ಥಿ ಘೋಷಿಸಿದ್ದೇವೆ. ಅವರಿಗೆ ಸ್ವಂತ ಅಭ್ಯರ್ಥಿಗಳಿಲ್ಲದೆ ಮೀನಾಮೇಷ ಎಣಿಸುತ್ತಿದ್ದಾರೆ ಎಂದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಮ್ ಸಮುದಾಯದವರಿಗೆ 20 ರಿಂದ 25 ಟಿಕೆಟ್ ನೀಡುತ್ತೇವೆ. ಜೆಡಿಎಸ್ ಪಕ್ಷದಲ್ಲಿರುವ ಒಕ್ಕಲಿಗ ಸಮುದಾಯದ ಶಾಸಕರು, ಮುಖಂಡರನ್ನು ತಮ್ಮತ್ತ ಸೆಳೆದುಕೊಳ್ಳುವುದರಿಂದ ಜೆಡಿಎಸ್ ಪಕ್ಷ ದುರ್ಬಲಗೊಳ್ಳುತ್ತದೆ ಎಂದು ಭಾವಿಸಿದರೆ ಅದು ನಿಮ್ಮ ಭ್ರಮೆ. ಜನ ಈಗಲೂ ಎಚ್.ಡಿ.ದೇವೇಗೌಡರ ಪರವಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ 123 ಸ್ಥಾನಗಳನ್ನು ಗೆಲ್ಲುವುದು ಕಷ್ಟದ ಕೆಲಸವೇನು ಇಲ್ಲ ಎಂದು ಅವರು ಹೇಳಿದರು.

ಪಕ್ಷ ಬಿಟ್ಟು ಹೋಗುತ್ತಿರುವವರು ಯಾರೂ ಸಹ ಪಕ್ಷದ ಸಂಘಟನೆ, ಬಲವರ್ಧನೆಗಾಗಿ ಶ್ರಮಿಸಿದವರಲ್ಲ. ಅವರು ಹೋಗುವುದರಿಂದ ಪಕ್ಷಕ್ಕೆ ಯಾವ ಆಘಾತವೂ ಆಗುವುದಿಲ್ಲ. ಈಗಾಗಲೆ ನಾಲ್ಕು ದಿನಗಳ ಕಾಲ ನಡೆದ ಜನತಾ ಪರ್ವ ಕಾರ್ಯಾಗಾರವು ಪಕ್ಷದ ಸಂಘಟನೆಯ ದೃಷ್ಟಿಯಿಂದ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

ನಾಳೆ ಹಾಗೂ ನಾಡಿದ್ದು ಅಲ್ಪಸಂಖ್ಯಾತರು, ಎಸ್ಸಿ-ಎಸ್ಟಿ ಹಾಗೂ ಒಬಿಸಿ ವಿಭಾಗಗಳ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ದಿಲ್ಲಿ, ಪಶ್ಚಿಮ ಬಂಗಾಳ, ತಮಿಳುನಾಡು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಕುರಿತು ಅಧ್ಯಯನ ನಡೆಸಲಾಗಿದ್ದು, ಮುಂದಿನ ಚುನಾವಣೆಗಾಗಿ ನನ್ನದೇ ಆದ ಯೋಜನೆ ರೂಪಿಸುತ್ತಿದ್ದೇನೆ. ಈ ಜನತಾ ಪರ್ವ ಕಾರ್ಯಾಗಾರವನ್ನು ಪಕ್ಷದ ಮೇಲೆ ಪ್ರೀತಿ ಇರುವಂತಹ ಯುವ ಮುಖಂಡರು, ಸಾಫ್ಟ್‍ವೇರ್ ಎಂಜಿನಿಯರ್‍ಗಳ ನೆರವಿನಿಂದ ರೂಪಿಸಲಾಗಿದೆ ಎಂದು ಅವರು ತಿಳಿಸಿದರು.

ಸಿದ್ದರಾಮಯ್ಯ ಸೇರಿದಂತೆ ಜೆಡಿಎಸ್ ಪಕ್ಷವನ್ನು ತೊರೆದಿರುವ ನಾಯಕರು ಇದ್ದಾಗಲೂ ಪಕ್ಷದ ಶಾಸಕರ ಸಂಖ್ಯೆ 50 ದಾಟಿರಲಿಲ್ಲ. 1999ರ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಸಿದ್ದರಾಮಯ್ಯ ನಮ್ಮ ಮನೆಗೆ ಬಂದು ದೇವೇಗೌಡರ ಎದುರು ಕಣ್ಣೀರು ಹಾಕಿದ್ದರು. ಅಲ್ಲದೆ, ರಾಜಕೀಯದಲ್ಲಿ ನನಗೆ ಭವಿಷ್ಯವಿಲ್ಲ. ನಾನು ವಕೀಲಿ ವೃತ್ತಿ ಮುಂದುವರೆಸಿಕೊಂಡು ಹೋಗುತ್ತೇನೆ ಎಂದು ಗೋಳಾಡಿದ್ದರು. ಈ ಸಂದರ್ಭದಲ್ಲಿ ಡಾ.ಎಚ್.ಸಿ.ಮಹದೇವಪ್ಪ ಜೊತೆಯಲ್ಲೆ ಇದ್ದರು ಎಂದು ಕುಮಾರಸ್ವಾಮಿ ಟೀಕಿಸಿದರು.

ಸ್ಪಷ್ಟ ಬಹುಮತದೊಂದಿಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್, ನಮ್ಮ ಪಕ್ಷದ 7 ಶಾಸಕರನ್ನು ಕರೆದುಕೊಂಡು ಹೋಯಿತು. ಅದರ ಪರಿಣಾಮ ಏನಾಯಿತು. 120 ರಿಂದ 78ಕ್ಕೆ ಕಾಂಗ್ರೆಸ್ ಕುಸಿಯಿತು. ಈಗಲೂ ನಮ್ಮ ಪಕ್ಷದ ಶಾಸಕರನ್ನು ಸೆಳೆದುಕೊಳ್ಳುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರು 38ಕ್ಕೂ ಕುಸಿಯಬಹುದು ಎಂದು ಅವರು ವ್ಯಂಗ್ಯವಾಡಿದರು.

ರಾಷ್ಟ್ರೀಯ ಪಕ್ಷ ಎಂದು ಕರೆಸಿಕೊಳ್ಳುವ ಕಾಂಗ್ರೆಸ್‍ಗೆ ದೇಶದಲ್ಲಿ ಭವಿಷ್ಯವಿಲ್ಲದಂತಾಗಿದೆ. ಬಿಜೆಪಿಯನ್ನು ಪ್ರಾದೇಶಿಕ ಪಕ್ಷಗಳೆ ಪ್ರಬಲ ಎದುರಾಳಿಯಾಗಲಿವೆ. ಪಂಜಾಬ್‍ನಲ್ಲಿ ಈಗಾಗಲೆ ಕಾಂಗ್ರೆಸ್ ಪಕ್ಷ ಇಬ್ಭಾಗವಾಗಿದೆ. ನಮ್ಮ ರಾಜ್ಯದಲ್ಲೂ ಆಂತರಿಕ ಕಚ್ಚಾಟ ಹೆಚ್ಚಿದ್ದು, ಮುಂದಿನ ಚುನಾವಣೆ ವೇಳೆಗೆ ಇಲ್ಲಿಯೂ ಅದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಕುಮಾರಸ್ವಾಮಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಝಫರುಲ್ಲಾ ಖಾನ್, ವಿಧಾನಪರಿಷತ್ ಮಾಜಿ ಸದಸ್ಯ ಶರವಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

 


SHARE THIS

Author:

0 التعليقات: