Sunday, 3 October 2021

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕೆಂದ ಸಚಿವ ಈಶ್ವರಪ್ಪ


 ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕೆಂದ ಸಚಿವ ಈಶ್ವರಪ್ಪ

ಮೈಸೂರು : ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕೆಂಬ ಹುಚ್ಚು ಹಿಡಿದಿದ್ದರೆ, ಡಿ.ಕೆ. ಶಿವಕುಮಾರ್ ಅವರಿಗೆ ಬಿಜೆಪಿಯವರನ್ನು ಎಳೆದುಕೊಳ್ಳಬೇಕೆಂಬ ಹುಚ್ಚು ಹಿಡಿದಿದೆ. ಈ ಹುಚ್ಚರನ್ನು ತಕ್ಷಣ ಹುಚ್ಚಾಸ್ಪತ್ರೆಗೆ ಸೇರಿಸಬೇಕಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನ್ಮ ದಿನದ ಅಂಗವಾಗಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ರವಿವಾರ ಆಯೋಜಿಸಿದ್ದ ಸೈಕಲ್ ಜಾಥಾಗೆ ಚಾಲನೆ ನೀಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಸಿದ್ದರಾಮಯ್ಯ ಹೇಗಾದರೂ ಮಾಡಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕೆಂದುಕೊಂಡರೆ, ಡಿ.ಕೆ.ಶಿವಕುಮಾರ್ ಬಿಜೆಪಿಯವರನ್ನು ಸೆಳೆದುಕೊಳ್ಳಬೇಕು ಎಂಬ ಪ್ರಯತ್ನ ಮಾಡುತ್ತಿದ್ದಾರೆ. ಈ ಇಬ್ಬರಿಗೂ ಅಧಿಕಾರದ ಹುಚ್ಚು ಹಿಡಿದಿದೆ. ಹಾಗಾಗಿ ಇವರನ್ನು ಹುಚ್ಚಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಬೇಕಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವುದಿರಲಿ ಮುಂಬರುವ ಚುನಾವಣೆಯಲ್ಲಿ ಗೆಲ್ಲಲಿ ಎಂದು ಸವಾಲು ಹಾಕಿದರು.

ಮುಂಬರುವ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಇಬ್ಭಾಗವಾಗಲಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರಿಗೂ ಅಧಿಕಾರಬೇಕು ಅದಕ್ಕಾಗಿ ಇಬ್ಬರೂ ಕಚ್ಚಾಡಲಿದ್ದಾರೆ. ಇದಕ್ಕಾಗಿ ಒಂದೂವರೆ ವರ್ಷ ಕಾಯಬೇಕಿಲ್ಲ ಎಂದು ಹರಿಹಾಯ್ದರು.

ಜಾತಿಗಣತಿ ಬಗ್ಗೆ ದನಿ ಎತ್ತುವುದಾಗಿ ಹೇಳಿದ್ದ ಸಿದ್ದರಾಮಯ್ಯ ವಿಧಾನಸಭಾ ಅಧಿವೇಶನದಲ್ಲಿ ಜಾತಿ ಗಣತಿ ಬಗ್ಗೆ ಬಾಯೇ ಬಿಡಲಿಲ್ಲ ಎಂದರು.

ಹಿಂದುಳಿದ ವರ್ಗದವರು, ದಲಿತರು ಮತ್ತು ಅಲ್ಪಸಂಖ್ಯಾತರನ್ನು ಸಿದ್ದರಾಮಯ್ಯ ದಾಳವಾಗಿ ಬಳಸಿಕೊಳ್ಳಲಾಗುತ್ತಿದೆ. ಅಹಿಂದ ವರ್ಗಕ್ಕೆ ಸಿದ್ದರಾಮಯ್ಯ ಏನೂ ಮಾಡುವುದಿಲ್ಲ ಎಂದು ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರಿಗೆ ಅರ್ಥವಾಗಿದೆ. ಹೀಗಾಗಿ ಅಹಿಂದ ವರ್ಗಗಳು ಕಾಂಗ್ರೆಸ್ ಗೆ ಬೆಂಬಲ ನೀಡುವುದಿಲ್ಲ, ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಸ್ಪಷ್ಟ ಬಹುಮತದೊಂದಿಗೆ ಗೆಲ್ಲಿಸಲಿದ್ದಾರೆ ಎಂದು ಹೇಳಿದರು.


SHARE THIS

Author:

0 التعليقات: