ವಸತಿ ಕ್ವಾರ್ಟರ್ಸ್ ತೆರವುಗೊಳಿಸಲು ಸರಕಾರದ ಸೂಚನೆ ವಿರುದ್ಧ ಏರ್ ಇಂಡಿಯಾ ಯೂನಿಯನ್ ಗಳಿಂದ ಮುಷ್ಕರದ ಬೆದರಿಕೆ
ಹೊಸದಿಲ್ಲಿ: ತಮ್ಮ ವಸತಿ ಕ್ವಾರ್ಟರ್ಸ್ ಅನ್ನು ತೆರವುಗೊಳಿಸಲು ಸರಕಾರದ ಆದೇಶವನ್ನು ಖಂಡಿಸಿ ಏರ್ ಇಂಡಿಯಾದ ಗ್ರೌಂಡ್ ಸಿಬ್ಬಂದಿ ಹಾಗೂ ಇಂಜಿನಿಯರ್ ಗಳ ಒಂದು ಗುಂಪು ನವೆಂಬರ್ 2ರಿಂದ ಮುಷ್ಕರ ನಡೆಸುವ ಬೆದರಿಕೆಯೊಡ್ಡಿದೆ.
ಏರ್ ಇಂಡಿಯಾ ಮಾರಾಟವಾದ ಆರು ತಿಂಗಳುಗಳೊಳಗಾಗಿ ಸಿಬ್ಬಂದಿ ತಮ್ಮ ಕ್ವಾರ್ಟರ್ಸ್ ತೆರವುಗೊಳಿಸುತ್ತಾರೆಂಬ ಕುರಿತು ತನಗೆ ಅಕ್ಟೋಬರ್ 15ರೊಳಗಾಗಿ ಲಿಖಿತ ಭರವಸೆ ನೀಡಬೇಕೆಂದು ಸರಕಾರ ಕೇಳಿದೆ ಎಂದು ಏರ್ ಇಂಡಿಯಾ ಉದ್ಯೋಗಿಗಳ ಯೂನಿಯನ್ನ ಜಂಟಿ ಸಂಘಟನೆಯೊಂದು ಹೇಳಿದೆ.
ಸಾಲ ಪೀಡಿತ ಏರ್ ಇಂಡಿಯಾ ಸಂಸ್ಥೆಯನ್ನು ರೂ. 18,000 ಕೋಟಿಗೆ ಖರೀದಿಸಲು ಮುಂದೆ ಬಂದಿದ್ದ ಟಾಟಾ ಸನ್ಸ್ ಅಕ್ಟೋಬರ್ 8ರಂದು ಬಿಡ್ ಗೆದ್ದಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.
ಉದ್ಯೋಗಿಗಳಿಗೆ ಮನೆ ತೆರವುಗೊಳಿಸಲು ಕನಿಷ್ಠ ಒಂದು ವರ್ಷ ಕಾಲಾವಕಾಶ ನೀಡಬೇಕು ಎಂದು ಏರ್ ಇಂಡಿಯಾ ಜಾಯಿಂಟ್ ಆಕ್ಷನ್ ಫೋರಂ ಆಫ್ ಯೂನಿಯನ್ಸ್ ಹೇಳಿದೆ.
ಸೇವೆಯಲ್ಲಿರುವಾಗಲೇ ಉದ್ಯೋಗಿಗಳಿಗೆ ಮನೆ ತೆರವುಗೊಳಿಸಲು ಹೇಳುವುದು ಕಾರ್ಮಿಕ ಕಾಯಿದೆಗೆ ವಿರುದ್ಧವಾಗಿ ಸೇವಾ ನಿಯಮಗಳ ಏಕಪಕ್ಷೀಯ ಬದಲಾವಣೆಯಾಗಿದೆ ಎಂದು ಯೂನಿಯನ್ಸ್ ಹೇಳಿದೆ. ಪ್ರಮುಖವಾಗಿ ನಿವೃತ್ತಿಯ ಅಂಚಿನಲ್ಲಿರುವ ಉದ್ಯೋಗಿಗಳು ಇದರಿಂದ ತೀವ್ರ ಬಾಧಿತರಾಗಲಿದ್ದಾರೆ ಎಂದೂ ಸಂಘಟನೆ ಹೇಳಿದೆ.
ವಸತಿ ಕ್ವಾರ್ಟರ್ಸ್ ಅನ್ನು ತೊರೆಯಲು ಹೇಳುವ ಮುನ್ನ ಸರಕಾರವು ಉದ್ಯೋಗಿಗಳಿಗೆ ನೀಡಬೇಕಾಗಿರುವ ಬಾಕಿಯನ್ನು ಚುಕ್ತಾಗೊಳಿಸಬೇಕು ಎಂದೂ ಆಗ್ರಹಿಸಲಾಗಿದೆ.
ಈ ಏರ್ ಇಂಡಿಯಾ ಜಾಯಿಂಟ್ ಆಕ್ಷನ್ ಫೋರಂ ಆಫ್ ಯೂನಿಯನ್ಸ್ನಲ್ಲಿ ಏರ್ ಕಾರ್ಪೊರೇಷನ್ ಎಂಪ್ಲಾಯೀಸ್ ಯೂನಿಯನ್, ಏವ್ಯೇಷನ್ ಇಂಡಸ್ಟ್ರಿ ಎಂಪ್ಲಾಯೀಸ್ ಗಿಲ್ಡ್ ಹಾಗೂ ಆಲ್ ಇಂಡಿಯಾ ಸರ್ವಿಸ್ ಇಂಜಿನಿಯರ್ಸ್ ಅಸೋಸಿಯೇಶನ್ ಇವೆ.
0 التعليقات: