Friday, 1 October 2021

ಟಾಟಾ ಸನ್ಸ್‌ಗೆ ಒಲಿಯಲಿದೆಯೇ ಏರ್‌ ಇಂಡಿಯಾ?

 

ಟಾಟಾ ಸನ್ಸ್‌ಗೆ ಒಲಿಯಲಿದೆಯೇ ಏರ್‌ ಇಂಡಿಯಾ? 

ಹೊಸದಿಲ್ಲಿ/ಮುಂಬಯಿ: ಟಾಟಾ ಸನ್ಸ್‌ಗೆ ಒಲಿಯಲಿದೆಯೇ ಏರ್‌ ಇಂಡಿಯಾ? ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವಿಮಾನ ಯಾನಕ್ಕೆ ಶ್ರೀಕಾರ ನೀಡಿದ ಟಾಟಾ ಸನ್ಸ್‌ ಸಂಸ್ಥೆಯ ತೆಕ್ಕೆಗೇ ಸರಕಾರಿ ಸ್ವಾಮ್ಯದ ಏರ್‌ ಇಂಡಿಯಾ ಒಲಿ ಯುವ ಸಾಧ್ಯತೆ ಅಧಿಕವಾಗಿದೆ. ಆದರೆ ಈ ಬಗ್ಗೆ ಕೇಂದ್ರ ಸರಕಾರ ಇನ್ನೂ ಅಧಿಕೃತವಾಗಿ ಹೇಳಿಕೆ ನೀಡಿಲ್ಲ ಮತ್ತು ಮಾಧ್ಯಮಗಳಲ್ಲಿ ಟಾಟಾ ಸನ್ಸ್‌ಗೇ ಏರ್‌ ಇಂಡಿಯಾ ಹಸ್ತಾಂತರವಾಗಿದೆ ಎಂಬ ವರದಿಗಳನ್ನು ಖಂಡತುಂಡವಾಗಿ ತಿರಸ್ಕರಿಸಿದೆ.

ಒಂದು ವೇಳೆ, ಈ ಸುದ್ದಿ ಹೌದಾಗಿದ್ದರೆ ದಶಕದ ಹಿಂದೆ ಆರಂಭವಾಗಿದ್ದ ಏರ್‌ ಇಂಡಿಯಾದಿಂದ ಬಂಡವಾಳ ವಾಪಸ್‌ ಪ್ರಕ್ರಿಯೆ ನಿರ್ಣಾಯಕ ಘಟ ಪ್ರವೇಶಿಸಿ ದಂತಾಗುತ್ತದೆ. ಕಳೆದ ಕೆಲವು ದಿನಗಳಿಂದ ಟಾಟಾ ಸನ್ಸ್‌ ಮತ್ತು ಸ್ಪೈಸ್‌ ಜೆಟ್‌ ಸರಕಾರಿ ವಿಮಾನ ಸಂಸ್ಥೆಯ ಖರೀದಿಯ ಅಂತಿಮ ಘಟ್ಟಕ್ಕೆ ಪ್ರವೇಶಿಸಿದ್ದವು. ಅಂತಿಮವಾಗಿ ಟಾಟಾ ಸನ್ಸ್‌ಗೇ ಅದು ಒಲಿಯುವ ಬಗ್ಗೆ ಹಲವು ವರದಿಗಳು ಪುಷ್ಟೀಕರಿ ಸಿದ್ದವು. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೇತೃತ್ವದ ಉನ್ನತಾಧಿಕಾರದ ಸಮಿತಿ ಸಭೆ ನಡೆಸಿ ಅಂತಿಮ ಸಮ್ಮತಿ ಸೂಚಿಸಬೇಕಾಗಿದೆ.

ಉದ್ಯಮಿ ಅಜಯ್‌ ಸಿಂಗ್‌ ಪ್ರವರ್ತಿತ ಸ್ಪೈಸ್‌ ಜೆಟ್‌ ಸಲ್ಲಿಸಿದ್ದ ಬಿಡ್‌ ಅನ್ನು ಕೆಲವು ದಿನಗಳ ಹಿಂದೆ ತೆರೆಯಲಾಗಿತ್ತು. ಅದಕ್ಕೆ ಬಂಡವಾಳ ಹಿಂಪಡೆಯುವ ಇಲಾಖೆಯ ಕಾರ್ಯ ದರ್ಶಿಗಳ ತಂಡ ಅತೃಪ್ತಿ ವ್ಯಕ್ತಪಡಿಸಿತ್ತು. ಮೀಸಲು ನಿಧಿಗಿಂತ ಕಡಿಮೆ ಮೊತ್ತವನ್ನು ಸೈಸ್‌ ಜೆಟ್‌ ಸಲ್ಲಿಕೆ ಮಾಡಿತ್ತು. ಟಾಟಾ ಸನ್ಸ್‌ ಸಲ್ಲಿಕೆ ಮಾಡಿದ್ದ ದಾಖಲೆಗಳನ್ನು ಪರಿಶೀಲಿಸಿದಾಗ ಅದು ಅತ್ಯಂತ ಹೆಚ್ಚು ಮೊತ್ತದ ಬಿಡ್‌ ಸಲ್ಲಿಸಿದ ಸಂಸ್ಥೆ ಎಂದು ಪರಿಗಣಿಸಲಾಯಿತು.

ಹಿಂದಿನ ಹಲವು ಸಂದರ್ಭಗಳಲ್ಲಿ ಕೇಂದ್ರ ಸರಕಾರ ವಿಮಾನಯಾನ ಸಂಸ್ಥೆ ಮಾರಾಟಕ್ಕೆ ಮುಂದಾಗಿತ್ತಾದರೂ ಪ್ರಯತ್ನ ಕೈಸಾಗಲಿಲ್ಲ. ಹಲವು ಸಂಸ್ಥೆಗಳ ಜತೆಗೆ ಟಾಟಾ ಸನ್ಸ್‌ ಕೂಡ ಏರ್‌ ಇಂಡಿಯಾ ಖರೀದಿಗೆ ಆಸಕ್ತಿ ವ್ಯಕ್ತಪಡಿಸಿತ್ತು.

ಸತತವಾಗಿ ನಷ್ಟ: ಸರಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ 2007ರಿಂದ ಸತತವಾಗಿ ನಷ್ಟ ಹೊಂದುತ್ತಾ ಬರುತ್ತಿದೆ. ಅದೇ ವರ್ಷ ವಿಮಾನಯಾನ ಸಂಸ್ಥೆಯನ್ನು ಇಂಡಿಯನ್‌ ಏರ್‌ಲೈನ್ಸ್‌ ನಲ್ಲಿ ವಿಲೀನಗೊಳಿಸಲಾಗಿತ್ತು. ಕೇಂದ್ರ ಸರಕಾರದ ವತಿಯಿಂದ ಅದಕ್ಕೆ ವಿತ್ತೀಯ ಚೈತನ್ಯ ತುಂಬಿದರೂ ಯಾವುದೇ ಪರಿಣಾಮ ಕಾಣಲಿಲ್ಲ. ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಹಾಯಕ ಸಚಿವ ವಿ.ಕೆ. ಸಿಂಗ್‌ 2020 ಮಾ.31ರಂದು ರಾಜ್ಯಸಭೆಗೆ ನೀಡಿದ ಮಾಹಿತಿ ಪ್ರಕಾರ 70,820 ಕೋಟಿ ರೂ. ನಷ್ಟದಲ್ಲಿದೆ.

ಭಾರೀ ವಿರೋಧ: ಟಾಟಾ ಸನ್ಸ್‌ಗೆ ಏರ್‌ ಇಂಡಿಯಾವನ್ನು ಹಸ್ತಾಂತರಿಸಲಾಗುತ್ತದೆ ಎಂಬ ವರದಿಗಳ ಬಗ್ಗೆ ಕಾರ್ಮಿಕ ಸಂಘಟನೆಗಳಿಂದ ಭಾರೀ ಪ್ರತಿರೋಧ ವ್ಯಕ್ತವಾಗಿದೆ. ತತ್‌ಕ್ಷಣವೇ ಪ್ರಸ್ತಾಕ ಕೈಬಿಡಬೇಕು ಎಂದು ಅಖೀಲ ಭಾರತ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌ ಒತ್ತಾಯಿಸಿದೆ. ಇದು ದೇಶದ ಮತ್ತು ಇಲ್ಲಿನ ಜನರ ಹಿತಾಸಕ್ತಿಗೆ ವಿರೋಧವಾದದ್ದು ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಅಮರ್‌ಜಿತ್‌ ಕೌರ್‌ ಆರೋಪಿಸಿದ್ದಾರೆ. ದೇಶದಲ್ಲಿನ ವಿಮಾನಯಾನ ಕಂಪೆನಿಗಳನ್ನು ಮಾರಾಟ ಮಾಡುವುದು ಸರಿಯಲ್ಲ. ಇದು ರಾಷ್ಟ್ರದ ಹಿತಾಸಕ್ತಿಗೆ ಮಾರಕ ಎಂದು ಅವರು ಟೀಕಿಸಿದ್ದಾರೆ.

ಜೆ.ಆರ್‌.ಡಿ. ಟಾಟಾ ಸ್ಥಾಪನೆ

ದೇಶದ ಮೊದಲ ಪರವಾನಿಗೆ ಹೊಂದಿದ ಪೈಲಟ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಉದ್ಯಮಿ, ಟಾಟಾ ಸನ್ಸ್‌ ಸಂಸ್ಥಾಪಕ ಜೆಹಾಂಗಿರ್‌ ರತನ್‌ಜಿ ದಾದಾಭಾಯ್‌ ಟಾಟಾ ಅವರು 1932ರಲ್ಲಿ ಸಂಸ್ಥೆಯನ್ನು ಸ್ಥಾಪನೆ ಮಾಡಿದ್ದರು. ಆರಂಭದಲ್ಲಿ ಅದನ್ನು ಟಾಟಾ ಏರ್‌ಲೈನ್ಸ್‌ ಎಂದು ಕರೆಯಲಾಗಿತ್ತು.

ವರದಿ ತಿರಸ್ಕರಿಸಿದ ಸರಕಾರ

ಏರ್‌ ಇಂಡಿಯಾ ಬಿಡ್‌ ಅನ್ನು ಟಾಟಾ ಸನ್ಸ್‌ ಗೆದ್ದುಕೊಂಡಿದೆ ಎಂದು “ಬ್ಲೂಮ್‌ಬರ್ಗ್‌ ಕ್ವಿಂಟ್‌’ ಮೂಲಗಳನ್ನು ಉಲ್ಲೇಖೀಸಿ ವರದಿ ಮಾಡಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಹೇಳಿಕೆ ನೀಡಿದ ಕೇಂದ್ರ ಹಣಕಾಸು ಸಚಿವಾಲಯ “ಏರ್‌ ಇಂಡಿಯಾ ಬಿಡ್‌ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ಅಂಶ ಸರಿಯಲ್ಲ. ನಿರ್ಧಾರ ಕೈಗೊಂಡಲ್ಲಿ ಕೂಡಲೇ ಪ್ರಕಟಿಸಲಾಗುತ್ತದೆ’ ಎಂದು ಸ್ಪಷ್ಟಪಡಿಸಿದೆ.

ಮಾರಾಟದ ಹಾದಿ

2001 ವಾಜಪೇಯಿ ನೇತೃತ್ವದ ಸರಕಾರದಿಂದ ಶೇ.40 ಷೇರು ಮಾರಾಟಕ್ಕೆ ಯತ್ನ.

2017 ಎರಡನೇ ಪ್ರಯತ್ನದಲ್ಲಿ ಶೇ. 24 ಷೇರನ್ನು ಮಾರಾಟಕ್ಕೆ ಯೋಚನೆ

2021- 3ನೇ ಪ್ರಯತ್ನದಲ್ಲಿ ಶೇ. 100 ಷೇರು ಮಾರಾಟ ಮಾಡುತ್ತಿರುವ ಸರಕಾರ.

ಯಾವ ಸಂಸ್ಥೆಗಳು?

ಏರ್‌ ಇಂಡಿಯಾ, ಏರ್‌ ಇಂಡಿಯಾ ಎಕ್ಸ್‌ಪ್ರಸ್‌ನ ಶೇ. 100 ಷೇರು ಹಾಗೂ ಎಐಎಸ್‌ಎಟಿಎಸ್‌ನ ಶೇ. 50 ಷೇರು ಮಾರಾಟ

ಏರ್‌ ಚಯಾದ ಒಟ್ಟು ಸಾಲ- 60,000 ಕೋಟಿ ರೂ.

ಕೊಳ್ಳುವವರ ಪಾಲಿಗೆ ಸಾಲ – 23,000 ಕೋಟಿ ರೂ.

ಉಳಿದ ಸಾಲದ ಹೊರೆ – ಎಐಎಎಚ್‌ಎಲ್‌ ಪಾಲಿಗೆ (ಮುಂಬಯಿಯ ಏರ್‌ ಇಂಡಿಯಾ ಬಿಲ್ಡಿಂಗ್‌ ಸೇರಿ ಕೆಲವು ಸ್ಥಿರಾಸ್ತಿಯನ್ನು ಎಐಎಎ ಚ್‌ಎಲ್‌ ನೋಡಿಕೊಳ್ಳಲಿದೆ)SHARE THIS

Author:

0 التعليقات: