Sunday, 31 October 2021

ಪ್ರಜಾಪ್ರಭುತ್ವ ‘ದುರ್ಬಲಗೊಳ್ಳುತ್ತಿರುವ’ ಈ ಸಮಯದಲ್ಲಿ ಸರ್ದಾರ್ ಪಟೇಲ್ ಕೊಡುಗೆ ಸ್ಮರಣೆ ಮುಖ್ಯ:ರಾಹುಲ್ ಗಾಂಧಿ


 ಪ್ರಜಾಪ್ರಭುತ್ವ ‘ದುರ್ಬಲಗೊಳ್ಳುತ್ತಿರುವ’ ಈ ಸಮಯದಲ್ಲಿ ಸರ್ದಾರ್ ಪಟೇಲ್ ಕೊಡುಗೆ ಸ್ಮರಣೆ ಮುಖ್ಯ: ರಾಹುಲ್ ಗಾಂಧಿ

ಹೊಸದಿಲ್ಲಿ: ಭಾರತದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದಂದು ಕಾಂಗ್ರೆಸ್ ರವಿವಾರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದೆ. ಪ್ರಜಾಪ್ರಭುತ್ವದ ಎಲ್ಲಾ ಸ್ತಂಭಗಳು ‘ದುರ್ಬಲಗೊಳ್ಳುತ್ತಿರುವ’ ಈ ಸಮಯದಲ್ಲಿ  ಅವರ ಕೊಡುಗೆಯನ್ನು ನೆನಪಿಸಿಕೊಳ್ಳುವುದು ಮುಖ್ಯ ಎಂದು ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಪಟೇಲ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ರೈತರ ಹೋರಾಟಕ್ಕೆ ಪಟೇಲ್ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿದರು. ಪಟೇಲ್ ಅವರ ಹೋರಾಟವು "ದಬ್ಬಾಳಿಕೆ ಎದುರಿಸುತ್ತಿರುವ ರೈತರ ಪರ ನ್ಯಾಯಕ್ಕಾಗಿ ಹೋರಾಟದಲ್ಲಿ ಬಂಡೆಯಂತೆ ನಿಲ್ಲಲು ನಮಗೆ ಸ್ಫೂರ್ತಿ ನೀಡುತ್ತದೆ" ಎಂದು ಹೇಳಿದರು.

"ಇಂದು, ನಮ್ಮ ಪ್ರಜಾಪ್ರಭುತ್ವದ ಎಲ್ಲಾ ಸ್ತಂಭಗಳು ದುರ್ಬಲಗೊಳ್ಳುತ್ತಿರುವಾಗ, ನಾವು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕೊಡುಗೆಯನ್ನು ಸ್ಮರಿಸಬೇಕಾಗಿದೆ. ಈ ಸ್ತಂಬಗಳನ್ನು ನಿರ್ಮಿಸಿದ ಕಾಂಗ್ರೆಸ್ ನಾಯಕರಲ್ಲಿ ಅವರು ಪ್ರಮುಖ ಧ್ವನಿಯಾಗಿದ್ದರು" ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಪ್ರಜಾಪ್ರಭುತ್ವವನ್ನು ರಕ್ಷಿಸುವುದೇ ಸರ್ದಾರ್ ಪಟೇಲ್ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ರಾಹುಲ್ ಹೇಳಿದರು.

"ಉಕ್ಕಿನ ಮನುಷ್ಯ" ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಬಾರ್ಡೋಲಿ ಸತ್ಯಾಗ್ರಹದಲ್ಲಿ ರೈತರ ಹಕ್ಕುಗಳು ಮತ್ತು ಸ್ವಾಭಿಮಾನದ ಧ್ವನಿಯನ್ನು ಎತ್ತಿದ್ದರು ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

 "ಭಾರತವನ್ನು ಒಗ್ಗೂಡಿಸುವ ಈ ಹೋರಾಟದಲ್ಲಿ; ದ್ವೇಷದ ಮೇಲೆ ಪ್ರೀತಿಗೆ ಜಯವನ್ನು ಖಚಿತಪಡಿಸುವ ಈ ಹೋರಾಟದಲ್ಲಿ; ನಮ್ಮ ರೈತರು, ನಮ್ಮ ಜನರು, ನಮ್ಮ ರಾಷ್ಟ್ರವನ್ನು ರಕ್ಷಿಸುವ ಈ ಹೋರಾಟದಲ್ಲಿ ನಾವು ಭಾರತ ರತ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಇಂದು ಮತ್ತು ಪ್ರತಿದಿನ ಸ್ಮರಿಸುತ್ತೇವೆ" ಎಂದು ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ ತಿಳಿಸಿದೆ.


SHARE THIS

Author:

0 التعليقات: