Friday, 22 October 2021

ಚಿಕ್ಕಮಗಳೂರು: ದಲಿತ ಕುಟುಂಬದ ಮೇಲೆ ಸವರ್ಣೀಯರಿಂದ ಹಲ್ಲೆ;


ಚಿಕ್ಕಮಗಳೂರು: ದಲಿತ ಕುಟುಂಬದ ಮೇಲೆ ಸವರ್ಣೀಯರಿಂದ ಹಲ್ಲೆ; 

ಚಿಕ್ಕಮಗಳೂರು, ಅ.22: ಜಿಲ್ಲೆಯ ಕೊಪ್ಪ ತಾಲೂಕಿನ ಕಲ್ಕೆರೆ ಗ್ರಾಮದಲ್ಲಿ ಜಮೀನು ಕಬಳಿಸುವ ಉದ್ದೇಶದಿಂದ ಬಡ ದಲಿತ ಕುಟುಂಬವೊಂದಕ್ಕೆ ಸವರ್ಣೀಯರು ಕಿರುಕುಳ ನೀಡುತ್ತಿರುವುದಲ್ಲದೆ ಕುಟುಂಬದ ಬುದ್ಧಿಮಾಂದ್ಯ ಯುವತಿಯೊಬ್ಬಳ ಮೇಲೆ ತೀವ್ರವಾಗಿ ಹಲ್ಲೆ ಮಾಡಿ ದೌರ್ಜನ್ಯ ನಡೆಸಿದ್ದಾರೆ. ಮನೆಗೆ ಪೆಟ್ರೋಲ್ ಸುರಿದು ಎಲ್ಲರನ್ನೂ ಸಾಯಿಸುವುದಾಗಿ ಕೊಲೆ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಕೊಪ್ಪ ಠಾಣೆಗೆ ದೂರು ನೀಡಿದ್ದರೂ ಆರೋಪಿಗಳ ವಿರುದ್ಧ ಪೊಲೀಸರು ಯಾವುದೇ ಕಾನೂನು ಕ್ರಮಕೈಗೊಂಡಿಲ್ಲ. ದೌರ್ಜನ್ಯ ನಡೆಸಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಚಂದ್ರಶೇಖರ್ ಆಗ್ರಹಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಪ್ಪ ತಾಲೂಕಿನ ಕಲ್ಕೆರೆ ಗ್ರಾಮದಲ್ಲಿ ಲೀಲಾ, ನಾಗೇಶ್ ಎಂಬ ಪರಿಶಿಷ್ಟ ಸಮುದಾಯದ ದಂಪತಿ ಮುಕ್ಕಾಲು ಎಕರೆ ಜಮೀನು ಹೊಂದಿದ್ದು, ಜಮೀನು ಸಕ್ರಮಕ್ಕಾಗಿ ಫಾರ್ಮ್ ನಂ.57ರಲ್ಲಿ ಅರ್ಜಿ ಸಲ್ಲಿಸಿದ್ದು, ಹಕ್ಕುಪತ್ರ ಸಿಕ್ಕಿಲ್ಲ. ದಂಪತಿಯ ಇಬ್ಬರು ಹೆಣ್ಣು ಮಕ್ಕಳ ಪೈಕಿ ಓರ್ವ ಯುವತಿ ಬುದ್ಧಿಮಾಂದ್ಯಳಾಗಿದ್ದು, ದಂಪತಿ ಕೂಲಿ ಕೆಲಸ ಮಾಡಿಕೊಂಡು ಸಂಕಷ್ಟದಲ್ಲೇ ಜೀವನ ನಡೆಸುತ್ತಿದ್ದಾರೆ. ದಲಿತ ಕುಟುಂಬದ ಜಮೀನಿನ ಅಕ್ಕಪಕ್ಕದಲ್ಲಿ ಮೇಲ್ವರ್ಗದ ಸವರ್ಣೀಯರು ವಾಸವಾಗಿದ್ದು, ಈ ಜಮೀನನ್ನು ಕಬಳಿಸುವ ಉದ್ದೇಶದಿಂದ ಮೇಲ್ವರ್ಗದವರು ಹಿಂದಿನಿಂದಲೂ ಕಿರುಕುಳ ನೀಡುತ್ತಿದ್ದಾರೆ. ಬಡಕುಟುಂಬವನ್ನು ಗ್ರಾಮದಿಂದ ಓಡಿಸಲು ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಕಳೆದ ಆ.3ರಂದು ಕಲ್ಕೆರೆ ಗ್ರಾಮದ ಮೇಲ್ವರ್ಗದವರಾದ ರವೀಂದ್ರ, ಅನಿಲ, ಸುಶೀಲಾ, ನಾಗೇಶ, ಶ್ರೀನಿವಾಸ್, ದಿನೇಶ್ ಎಂಬವರು ಇದೇ ಜಾಗದ ವಿಚಾರದಲ್ಲಿ ವಿನಾಕಾರಣ ದಲಿತ ಮಹಿಳೆ ಲೀಲಾ ಅವರ ಮನೆಗೆ ನುಗ್ಗಿ ದಾಂಧಲೆ, ಹಲ್ಲೆ ಮಾಡಿದ್ದಾರೆಂದು ಆರೋಪಿಸಿರುವ ಅವರು, ಸುಶೀಲಾ ಎಂಬವರು ಲೀಲಾ ಅವರ ಬುದ್ಧಿಮಾಂದ್ಯ ಮಗಳ ತಲೆಗೆ ಕತ್ತಿಯಿಂದ ಹಲ್ಲೆ ಮಾಡಿ ಗಂಭೀರವಾಗಿ ಗಾಯಗೊಳಿಸಿದ್ದಾರೆ. ನಂತರ ಮೇಲ್ವರ್ಗದವರೇ ಕೊಪ್ಪ ಪೊಲೀಸರಿಗೆ ದೂರು ನೀಡಿ ಸುಳ್ಳು ಆರೋಪ ಹೊರಿಸಿದ್ದಾರೆ. ಠಾಣೆಗೆ ಕರೆಸಿದ ಪೊಲೀಸರು ಒಪ್ಪಂದ ಮಾಡಿ ಕಳಿಸಿದ್ದಾರೆ. ಆದರೆ ಮಾರನೆ ದಿನ ಸಂಜೆ ಮೇಲ್ವರ್ಗದವರು ಮತ್ತೆ ಲೀಲಾ ಮನೆಗೆ ಕಲ್ಲು ಹೊಡೆದು ದಾಳಿ ಮಾಡಿದ್ದಾರೆ ಎಂದು ದೂರಿದರು.

ರಸ್ತೆಯಲ್ಲಿ ತಿರುಗಾಡಿದರೆ ಕೊಚ್ಚಿ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಬೆದರಿಕೆ ಹಿನ್ನೆಲೆಯಲ್ಲಿ ಜೀವಭಯದಿಂದ ದಲಿತ ಕುಟುಂಬ ಕೊಪ್ಪ ಠಾಣೆ ಪೊಲೀಸರಿಗೆ ದೂರು ನೀಡಿ ಅಟ್ರಾಸಿಟಿ ದೂರು ದಾಖಲಿಸಿದ್ದಾರೆ. ದೂರು ನೀಡಿ ತಿಂಗಳಾಗಿದ್ದರೂ ಪೊಲೀಸರು ಇದುವರೆಗೂ ಆರೋಪಿಗಳನ್ನು ಬಂಧಿಸಿಲ್ಲ.

ಪೊಲೀಸರೂ ಸೇರಿದಂತೆ ಯಾವ ಇಲಾಖೆಯವರೂ ಸ್ಥಳಕ್ಕೆ ಭೇಟಿ ನೀಡಿ ನೊಂದ ದಲಿತ ಕುಟುಂಬಕ್ಕೆ ನ್ಯಾಯ ಕೊಡಿಸಲು ಮುಂದಾಗಿಲ್ಲ ಎಂದು ಆಪಾದಿಸಿದರು.

ದಲಿತ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ತಪ್ಪಿದಲ್ಲಿ ಅ.28ರಂದು ಚಿಕ್ಕಮಗಳೂರು ನಗರದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ಧರಣಿ ನಡೆಸಲಾಗುವುದು ಎಂದರು.

ಗೋಷ್ಠಿಯಲ್ಲಿ ಕಲ್ಕೆರೆ ಗ್ರಾಮದ ದಲಿತ ಸಮುದಾಯದ ಸಂತ್ರಸ್ತರು ಸೇರಿದಂತೆ ದಸಂಸ ಮುಖಂಡರಾದ ಪುಟ್ಟಸ್ವಾಮಿ, ದಿವಾಕರ್, ಗಣೇಶ್, ಹಾದಿಹಳ್ಳಿ ಅಶೋಕ್, ಪೂವಯ್ಯ ಇದ್ದರು.SHARE THIS

Author:

0 التعليقات: