Friday, 29 October 2021

ಮೀನುಗಾರಿಕೆಯಲ್ಲಿ ರೋಬೋಟಿಕ್ಸ್ ತಂತ್ರಜ್ಞಾನ: ಸಚಿವ ಡಾ. ಅಶ್ವಥ ನಾರಾಯಣ

 ಮೀನುಗಾರಿಕೆಯಲ್ಲಿ ರೋಬೋಟಿಕ್ಸ್ ತಂತ್ರಜ್ಞಾನ: ಸಚಿವ ಡಾ. ಅಶ್ವಥ ನಾರಾಯಣ

ಮಂಗಳೂರು: ರಾಜ್ಯದ ಕರಾವಳಿಯಲ್ಲಿ ರೋಬೋಟಿಕ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಮೂಲಕ ಮೀನುಗಾರಿಕೆಯನ್ನು ಆದಾಯದಾಯಕವಾಗಿ ಬೆಳೆಸಲಾಗುವುದು ಮತ್ತು ಮಂಗಳೂರಿನಲ್ಲಿ ಕಿಯೋನಿಕ್ಸ್ ವತಿಯಿಂದ ಸಾಫ್ಟ್‌ವೇರ್ ಪಾರ್ಕ್ ಸ್ಥಾಪಿಸಲಾಗುವುದು ಎಂದು ಉನ್ನತ ಶಿಕ್ಷಣ, ಐಟಿ ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಕರ್ನಾಟಕ ಡಿಜಿಟಲ್ ಇಕಾನಮಿ ಮಿಷನ್ ವತಿಯಿಂದ ನಗರದ ಓಷಿಯನ್ ಪರ್ಲ್ ಸಭಾಂಗಣದಲ್ಲಿ ಶುಕ್ರವಾರ ಮಂಗಳೂರು ಟೆಕ್ನೋವಾಂಝಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಕರಾವಳಿಯಲ್ಲಿ ಅಪಾರವಾದ ಮತ್ಸ ಸಂಪತ್ತು ಇದೆ. ಇದನ್ನು ಆದಾಯದ ದೊಡ್ಡ ವಲಯವಾಗಿ ಗುರುತಿಸಲು ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ. ಸಾಫ್ಟ್‌ವೇರ್ ಪಾರ್ಕ್ ಸ್ಥಾಪಿಸಲು ಸರಕಾರ ಈಗಾಗಲೇ ಅನುಮೋದನೆ ನೀಡಿದೆ. ಸ್ಟಾರ್ಟ್‌ಅಪ್‌ಗಳನ್ನು ಸರಕಾರ ಪ್ರೋತ್ಸಾಹಿಸಲಿದ್ದು, ಕರ್ನಾಟಕದಲ್ಲಿ ಎಲಿವೇಟ್‌ಕಾರ್ಯಕ್ರಮಯ ಅನ್ವಯ ಮಂಗಳೂರು ಕ್ಲಸ್ಟರ್‌ಗೆ ವಿಶೇಷ ನಿಧಿಯನ್ನು ಕೊಡಲಾಗುವುದು. ನಗರದಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಫೋರ್ ಫಿನ್ ಟೆಕ್ ಸ್ಥಾಪನೆಗಾಗಿ 12 ಕೋಟಿ ರೂ.ಗಳನ್ನು ಫೆಬ್ರವರಿಯ ಬಜೆಟ್‌ನಲ್ಲಿ ಮೀಸಲಾಗಿಟ್ಟು ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.

ಆರಿನ್ ಕ್ಯಾಪಿಟಲ್‌ನ ಸಹ ಸಂಸ್ಥಾಪಕ ಹಾಗೂ ಅಧ್ಯಕ್ಷ ಮೋಹನ್‌ದಾಸ್‌ರವರು ಕಾರ್ಯಕ್ರಮದಲ್ಲಿ ವರ್ಚುವಲ್ ಮೂಲಕ ಮಾತನಾಡಿ, ಟೆಕ್ ಉದ್ಯಮಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ 1000 ಕೋಟಿ ರೂ. ಅನುದಾನ ದೊರಕಿದ್ದಲ್ಲಿ ಸ್ಟಾರ್ಟ್ ಅಪ್‌ಗಳಿಗೆ ಬೆಂಬಲ ದೊರಕಲಿದೆ ಮಾತ್ರವಲ್ಲದೆ 6ರಿಂದ 7 ಲಕ್ಷ ಉನ್ನತ ಗುಣಮಟ್ಟದ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅಭಿಪ್ರಾಯಿಸಿದರು.ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯಕ್ಕಾಗಿನ ಸರಕಾರದ ಮುಖ್ಯ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್ ಮಾತನಾಡಿ, ಟಾಟಾ ಟೆಕ್ನಾಲಜೀಸ್ ಲಿಮಿಟೆಡ್ (ಟಿಟಿಎಲ್)ನ ಸಹಭಾಗಿತ್ವದಲ್ಲಿ 150 ಐಟಿಐಗಳನ್ನು ಟೆಕ್ನಾಲಜಿ ಹಬ್‌ಗಳಾಗಿ ಮೇಲ್ದರ್ಜೆಗೇರಿಸಲಾಗುವುದು. ಆಯ್ದ ಐಟಿಐಗಳಿಗಾಗಿ ಸರಕಾರ 30 ಕೋಟಿ ರೂ.ಗಳನ್ನು ವಿನಿಯೋಗಿಸಲಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ 4500 ಕೋಟಿ ರೂ.ಗಳನ್ನು ಈ ಐಟಿಐಗಳಿಗಾಗಿ ವಿನಿಯೋಗಿಸಲಾಗಿದೆ ಎಂದರು.

ಇಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ಎಸ್ ಮತ್ತು ಟಿ ಸಚಿವಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣ ರೆಡ್ಡಿ ಮಾತನಾಡಿ, ಬೆಂಗಳೂರಿನಿಂದಾಚೆಗೆ ನಗರಗಳಲ್ಲಿ ಅನುಶೋಧನೆ ಮತ್ತು ತಂತ್ರಜ್ಞಾನ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಗ್ಗೆ ಸರಕಾರ ಸ್ಪಷ್ಟ ಗುರಿಯನ್ನು ಹೊಂದಿದೆ ಎಂದರು. 2026ರ ವೇಳೆಗೆ 10 ಲಕ್ಷ ನೇರ ಹಾಗೂ ಪರೋಕ್ಷ ಉದ್ಯೋಗಾವಕಾಶ ಸೃಷ್ಟಿಸುವ ಗುರಿಯನ್ನೂ ಹೊಂದಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಅಧ್ಯಕ್ಷ ಬಿ.ವಿ. ನಾಯ್ಡು, ಲಹರಿ ಎಂಡಿ ಮತ್ತು ಸಿಇಓ ಸಂಜೀವ್ ಗುಪ್ತಾ, ಟೆಕ್ನಿಕಲರ್ ಇಂಡಿಯಾದ ಕಂಟ್ರಿ ಹೆಡ್ ಬಿರೇನ್ ಘೋಷ್, ಕರ್ನಾಟಕ ಸ್ಟಾರ್ಪಪ್ ವಿಷನ್ ಗ್ರೂಪ್ ಅಧ್ಯಕ್ಷ ಮತ್ತು ಆಕ್ಸೆಲ್ ಪಾಲುದಾರ ಪ್ರಶಾಂತ್ ಪ್ರಕಾಶ್, ಮೀನಾ ನಾಗರಾಜ್, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಜಿ.ಪಂ. ಸಿಇಒ ಡಾ. ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.


SHARE THIS

Author:

0 التعليقات: