Monday, 11 October 2021

ರಣಮಳೆಗೆ ಬೆಚ್ಚಿ ಬಿದ್ದ ಬೆಂಗಳೂರು, ಏರ್​ಪೋರ್ಟ್​ ಜಲಾವೃತ, ವಿಮಾನ ಹತ್ತೋಕೆ ಟ್ರ್ಯಾಕ್ಟರ್​ನಲ್ಲಿ ಡ್ರಾಪ್


ರಣಮಳೆಗೆ ಬೆಚ್ಚಿ ಬಿದ್ದ ಬೆಂಗಳೂರು, ಏರ್​ಪೋರ್ಟ್​ ಜಲಾವೃತ, ವಿಮಾನ ಹತ್ತೋಕೆ ಟ್ರ್ಯಾಕ್ಟರ್​ನಲ್ಲಿ ಡ್ರಾಪ್

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸುರಿದ ರಣಮಳೆಗೆ ಜನರು ಬೆಚ್ಚಿ ಬಿದ್ದಿದ್ದಾರೆ. ಸೋಮವಾರ ರಾತ್ರಿಯಿಡೀ ಸುರಿದ ಮಳೆಯ ಪರಿಣಾಮ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಬೆಂಗಳೂರಿನ ಹಲವೆಡೆ ಮಳೆ ನೀರು ಮನೆಗಳಿಗೆ ನುಗ್ಗಿದ್ದು, ಅಪಾರ ಹಾನಿಯಾಗಿದೆ. ವಸಂತನಗರ, ನಾಗರಭಾವಿ, ಬಸವೇಶ್ವರ ನಗರ ಸೇರಿದಂತೆ ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಇನ್ನು, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಮಳೆಯಿಂದಾಗಿ ಭಾರೀ ಅವಾಂತರ ಸೃಷ್ಟಿಯಾಗಿತ್ತು. ವಿಮಾನ ನಿಲ್ದಾಣದ ಬಳಿ ಭಾರೀ ಮಳೆಯ ಪರಿಣಾಮ ಪ್ರಯಾಣಿಕರು ಟ್ರ್ಯಾಕ್ಟರ್ ಹೇರಿ ಪ್ರಯಾಣಿಸಿರುವ ವಿಡಿಯೋ ಸಖತ್ ವೈರಲ್ ಆಗಿದೆ.

ಎಲ್ಲಾ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆ, ಕರ್ನಾಟಕದಲ್ಲಿ ಇನ್ನೂ ಮೂರು ದಿನ ಅಂದರೆ ಗುರುವಾರದವರೆಗೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇಂದು ಮಳೆಯ ಪ್ರಮಾಣ ಹೆಚ್ಚಾಗಲಿದೆ. ಹೀಗಾಗಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇಂದು ಹಳದಿ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಬಾರಿ ರಾಜ್ಯದಲ್ಲಿ ಮುಂಗಾರು ಮಾರುತ ಇನ್ನೂ ಪ್ರಬಲವಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಮನೆಗಳಿಗೆ ನುಗ್ಗಿದ ಮಳೆ ನೀರು

ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ವಸಂತನಗರ, ನಾಗರಭಾವಿ, ಬಸವೇಶ್ವರ ನಗರ ಸೇರಿದಂತೆ ಹಲವೆಡೆ ಧಾರಾಕಾರ ಮಳೆಗೆ ಹಾನಿ ಉಂಟಾಗಿದೆ. ರಾತ್ರಿ ಬಿಬಿಎಂಪಿ ಸಹಾಯವಾಣಿಗೆ ಎಂಟು ಕಡೆಯಿಂದ ಫೋನ್ ಕರೆಗಳು ಬಂದಿವೆ. ಬೆಳಗ್ಗೆ ಯಾವುದೇ ಮಳೆಹಾನಿ ಕುರಿತು ಕರೆ ಬಂದಿಲ್ಲ ಎಂದು ಬಿಬಿಎಂಪಿ ಕಂಟ್ರೋಲ್ ರೂಂ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಏರ್​ಪೋರ್ಟ್​​ ಜಲಾವೃತ

ರಾಜಧಾನಿ ಬೆಂಗಳೂರಿನಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಕಳೆದ ರಾತ್ರಿ ನಗರದ ಬಹುತೇಕ ಭಾಗದಲ್ಲಿ ಭಾರಿ ಮಳೆ ಸುರಿದಿದೆ. ಮಳೆಯ ತೀವ್ರತೆಗೆ ಪ್ರಯಾಣಿಕರು ತೊಂದರೆಗೀಡಾಗಿದ್ದಾರೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಲು ಪ್ರಯಾಣಿಕರು ಪರದಾಡಿದ್ದಾರೆ. ಕಳೆದ ರಾತ್ರಿ ಏರ್ಪೋಟ್ ರಸ್ತೆಯಲ್ಲೇ ಮಂಡಿಯುದ್ದಕ್ಕೆ ಮಳೆ ನೀರು ನಿಂತಿತ್ತು.

ಟ್ರ್ಯಾಕ್ಟರ್​​ನಲ್ಲಿ ಪ್ರಯಾಣಿಕರ ಡ್ರಾಪ್

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದ ಹಿನ್ನೆಲೆ, ಟರ್ಮಿನಲ್​​ನಿಂದ ಟ್ರ್ಯಾಕ್ಟರ್ ನಲ್ಲಿ ಪ್ರಯಾಣಿಕರನ್ನು ಕಾರುಗಳ ಬಳಿ ಡ್ರಾಪ್ ಮಾಡಲಾಯಿತು. ಟರ್ಮಿನಲ್ ಒಳಗೆ ಮಳೆ ನೀರು ನುಗ್ಗಿದ್ದ ಹಿನ್ನೆಲೆ, ರಾತ್ರಿ ಪೂರ್ತಿ ಏರ್ಪೋರ್ಟ್ ರಸ್ತೆ ಸಂಪೂರ್ಣ ಜಲಾವೃತವಾಗಿತ್ತು. ಹೀಗಾಗಿ ಕಾರುಗಳತ್ತ ತೆರಳಲು ಪ್ರಯಾಣಿಕರು ಹರಸಾಹಸ ಪಡುವಂತಾಗಿತ್ತು. ಪ್ರಯಾಣಿಕರನ್ನ ಕರೆತರಲು ಬೇರೆ ಯಾವುದೇ ವಾಹನ ಇರದ ಕಾರಣ ಟ್ರ್ಯಾಕ್ಟರ್ ಏರಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸದ್ಯ ಟ್ರ್ಯಾಕ್ಟರ್ ಏರಿದ ವಿಮಾನ ಪ್ರಯಾಣಿಕರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.SHARE THIS

Author:

0 التعليقات: