ಕೋರ್ಟ್ ನಲ್ಲಿ ಕೃಷಿ ಕಾನೂನನ್ನು ಪ್ರಶ್ನಿಸಿದ ಬಳಿಕವೂ ರೈತರು ಪ್ರತಿಭಟನೆ ನಡೆಸುತ್ತಿರುವುದೇಕೆ?: ಸುಪ್ರೀಂಕೋರ್ಟ್
ಹೊಸದಿಲ್ಲಿ: ನ್ಯಾಯಾಲಯದಲ್ಲಿ ಕೃಷಿ ಕಾನೂನುಗಳನ್ನು ಪ್ರಶ್ನಿಸಿದ ಬಳಿಕವೂ ರೈತರು ಏಕೆ ಪ್ರತಿಭಟನೆ ನಡೆಸುತ್ತಿದ್ದಾರೆ? ಎಂದು ಸುಪ್ರೀಂ ಕೋರ್ಟ್ ಇಂದು ಪ್ರಶ್ನಿಸಿದೆ. ಕೃಷಿ ಕಾನೂನುಗಳ ಸಮಸ್ಯೆಯನ್ನು ನ್ಯಾಯಾಲಯದಲ್ಲಿ ತೀರ್ಮಾನಿಸುವಾಗ ರೈತರಿಗೆ ಪ್ರತಿಭಟಿಸುವ ಹಕ್ಕಿದೆಯೇ ಎಂದು ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿತು.
ದಿಲ್ಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆಗೆ ಅನುಮತಿ ಕೋರಿ ರೈತರ ಗುಂಪು ಸಲ್ಲಿಸಿದ್ದ ಅರ್ಜಿಗೆ ಸುಪ್ರೀಂ ಕೋರ್ಟ್ ಪ್ರತಿಕ್ರಿಯೆ ನೀಡಿದೆ. ಅಕ್ಟೋಬರ್ 21 ರ ಮುಂದಿನ ವಿಚಾರಣೆಯಲ್ಲಿ ನ್ಯಾಯಾಲಯವು ಪ್ರತಿಭಟಿಸುವ ಹಕ್ಕು "ಸಂಪೂರ್ಣ ಹಕ್ಕು" ಹೌದೇ ಎಂದು ನಿರ್ಧರಿಸುತ್ತದೆ ಎಂದು ಹೇಳಿದೆ.
"ನಿನ್ನೆ ಲಖಿಂಪುರ್ ಖೇರಿಯಲ್ಲಿ ನಡೆದಂತಹ ದುರದೃಷ್ಟಕರ ಘಟನೆಗಳನ್ನು ತಡೆಗಟ್ಟಲು, ಯಾವುದೇ ಹೆಚ್ಚಿನ ಪ್ರತಿಭಟನೆಗಳನ್ನು ಮಾಡಬಾರದು" ಎಂದು ಸರಕಾರದ ಪರ ವಕೀಲರು ಹೇಳಿಕೆ ನೀಡಿದ್ದಾರೆ. ಲಖಿಂಪುರ್ ಖೇರಿಗೆ ಕೇಂದ್ರ ಸಚಿವರ ಭೇಟಿ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಹಿಂಸಾಚಾರದಲ್ಲಿ ನಿನ್ನೆ ನಾಲ್ಕು ರೈತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದರು.
ಇಂದು, ಸುಪ್ರೀಂ ಕೋರ್ಟ್ ರಾಜಸ್ಥಾನ ಮೂಲದ ರೈತ ಗುಂಪು "ಕಿಸಾನ್ ಮಹಾಪಂಚಾಯತ್" ನ ಮನವಿಯನ್ನು ಆಲಿಸುತ್ತಿದ್ದು, ಜಂತರ್ ಮಂತರ್ ನಲ್ಲಿ 200 ರೈತರೊಂದಿಗೆ "ಸತ್ಯಾಗ್ರಹ" ನಡೆಸಲು ಅನುಮತಿ ಕೋರಿತ್ತು. ಕೃಷಿ ಕಾನೂನುಗಳ ವಿರುದ್ಧ ರಾಜಸ್ಥಾನ ಹೈಕೋರ್ಟ್ನಲ್ಲಿ ಅರ್ಜಿದಾರರು ಅರ್ಜಿ ಸಲ್ಲಿಸಲು ಮತ್ತು ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನೀಡುವಂತೆ ಕೋರಿಕೊಂಡಿರುವುದಕ್ಕೆ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ ಎಂದು ವರದಿ ತಿಳಿಸಿದೆ.
0 التعليقات: