ಆರೆಸ್ಸೆಸ್ ಆನೆ ಇದ್ದಂತೆ, ಅದು ಯಾರು ಏನೇ ಹೇಳಿದರೂ ತಲೆಕೆಡಿಸಿಕೊಳ್ಳಲ್ಲ: ಸಿ.ಟಿ. ರವಿ
ಚಿಕ್ಕಮಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆನೆ ಇದ್ದಂತೆ, ಆನೆ ತನ್ನದೇ ದಾರಿಯಲ್ಲಿ ನಡೆದುಕೊಂಡು ಹೋಗುತ್ತದೆ. ಯಾರು ಏನೇ ಅಂದರು ಆನೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಆರೆಸ್ಸೆಸ್ ದೇಶಭಕ್ತ ಸಂಘಟನೆ, ಹಾಗಾಗಿ ಹಿಂದೂಗಳಲ್ಲಿ ಒಗ್ಗಟ್ಟು, ರಾಷ್ಟ್ರೀಯತೆ ಇದೆ. ಇಲ್ಲದಿದ್ದರೇ ಜಾತಿ, ಪ್ರಾದೇಶಿಕತೆಯ ಆಧಾರದಲ್ಲಿ ನಮ್ಮ ನಡುವಿನ ಕಿತ್ತಾಟದಿಂದ ಮೂರನೇಯವರು ಲಾಭ ಪಡೆದುಕೊಳ್ಳುತ್ತಿದ್ದರು. ಹಿಂದೆ ಈ ದೇಶದ ಮೇಲೆ ಆಕ್ರಮಣ ಮಾಡಿದವರ ಸಾಮರ್ಥ್ಯಕ್ಕಿಂತ ನಮ್ಮಲ್ಲಿನ ಒಡಕಿನ ಲಾಭ ಪಡೆದು ಆಕ್ರಮಣ ಮಾಡಿದರು. ಈ ಸತ್ಯದ ಅರಿವಿದ್ದವರಿಗೆ ಆರೆಸ್ಸೆಸ್ ಅರ್ಥವಾಗುತ್ತದೆ. ಸತ್ಯದ ಅರಿವಾಗುತ್ತದೆ. ನಾನು ಬದುಕಿರುವರೆಗೆ ಹೇಗಾದರೂ ಸರಿ ಜನರ ಮತ ಬಂದರೆ ಸಾಕು ಎನ್ನುವವರಿಗೆ ಆರೆಸ್ಸೆಸ್ ಅರ್ಥವಾಗುವುದಿಲ್ಲ ಎಂದರು.
ಬೆಂಗಳೂರು ಉಸ್ತುವಾರಿ ಸಚಿವರ ನೇಮಕ ಸಂಬಂಧ ಪ್ರತಿಕ್ರಿಯಿಸಿದ ಅವರು, ನಾನು ಆ ವಿಚಾರಕ್ಕೆ ತಲೆ ಹಾಕಲ್ಲ. ಯಾರಿಗೆ ಉಸ್ತುವಾರಿ ನೀಡಬೇಕು ಎನ್ನುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ. ಆಯಾ ಜಿಲ್ಲೆಗಳ ಪರಿಸ್ಥಿತಿ ಆಧಾರಿಸಿ ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಇದರ ಬಗ್ಗೆ ನಾನೇನು ಹೇಳಲ್ಲ. ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮತ್ತು ರಾಜ್ಯ ಉಸ್ತುವಾರಿ ಅರುಣ್ಸಿಂಗ್ ಸಲಹೆ ಕೇಳಿದರೆ ಸಲಹೆ ಕೊಡುತ್ತೇನೆ ಎಂದರು.
0 التعليقات: