ಸಾಮಾಜಿಕ ತಾಣದ ಪೋಸ್ಟ್ ಗೆ ಸಂಬಂಧಿಸಿ ಹಲ್ಲೆ ಪ್ರಕರಣ: ಮಹಾರಾಷ್ಟ್ರ ಸಚಿವರ ಬಂಧನ, ಜಾಮೀನಿನ ಮೇಲೆ ಬಿಡುಗಡೆ
ಥಾಣೆ: ಸಾಮಾಜಿಕ ಜಾಲತಾಣ ಪೋಸ್ಟ್ ಒಂದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆಂಬ ಆರೋಪದ ಮೇಲೆ ಮಹಾರಾಷ್ಟ್ರ ವಸತಿ ಸಚಿವ ಹಾಗೂ ಎನ್ಸಿಪಿ ನಾಯಕ ಜಿತೇಂದ್ರ ಅವರನ್ನು ಗುರುವಾರ ಬಂಧಿಸಿದ ಪೊಲೀಸರು ನಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.
ಜಿತೇಂದ್ರ ಆಹ್ವದ್ ಅವರು ಥಾಣೆಯ ವರ್ತಕ್ ನಗರ್ ಪೊಲೀಸ್ ಠಾಣೆಗೆ ಸ್ವತಃ ಹಾಜರಾದ ನಂತರ ಅವರ ಹೇಳಿಕೆಯನ್ನು ದಾಖಲಿಸಿಕೊಂಡು ಮ್ಯಾಜಿಸ್ಟ್ರೇಟ್ ಎದುರು ಅವರನ್ನು ಹಾಜರುಪಡಿಸಲಾಯಿತು. ರೂ 10,000 ನಗದು ಬಾಂಡ್ ಮೇಲೆ ನಂತರ ಅವರನ್ನು ಬಿಡುಗಡೆಗೊಳಿಸಲಾಯಿತು.
ದೂರುದಾರ, ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ಆನಂದ್ ಕರ್ಮುಸೆ ಅವರನ್ನು ಸಚಿವರು ಎಪ್ರಿಲ್ 5, 2020ರಂದು ತಮ್ಮ ಬಂಗಲೆಗೆ ಕರೆಸಿ ನಂತರ ಹಲ್ಲೆಯಾಗುವಂತೆ ನೋಡಿಕೊಂಡಿದ್ದಾರೆಂದು ಆರೋಪಿಸಲಾಗಿದೆ.
ಆಹ್ವದ್ ಅವರನ್ನು ಆರೋಪಿ ಎಂದು ಹೆಸರಿಸಬೇಕೆಂದು ದೂರುದಾರ ಹೇಲಿದ ನಂತರ ಬಾಂಬೆ ಹೈಕೋರ್ಟ್ ಈ ಕುರಿತು ಸೂಕ್ತ ಕ್ರಮಕೈಗೊಳ್ಳುವಂತೆ ಥಾಣೆ ಪೊಲೀಸರಿಗೆ ಸೂಚಿಸಿತ್ತು.
ಸಚಿವರ ಬಂಗಲೆಯಲ್ಲಿ ತಮ್ಮ ಮೇಲೆ 10ರಿಂದ 15 ಮಂದಿ ಹಲ್ಲೆ ನಡೆಸಿದ್ದಾರೆಂದು ದೂರುದಾರ ಆರೋಪಿಸಿದ್ದಾರೆ. ಫೇಸ್ಬುಕ್ನಲ್ಲಿ ಸಚಿವರ ತಿರುಚಲ್ಪಟ್ಟ ಫೋಟೋ ಪ್ರಕಟಿಸಿದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಆದರೆ ಸಚಿವರು ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ.
0 التعليقات: