Saturday, 2 October 2021

ಅಹಿಂಸಾ ಸಿದ್ಧಾಂತವನ್ನು ಯುವ ಜನತೆಗೆ ಮನವರಿಕೆ ಮಾಡಿಕೊಡಬೇಕಿದೆ: ರಮಾನಾಥ ರೈ


 ಅಹಿಂಸಾ ಸಿದ್ಧಾಂತವನ್ನು ಯುವ ಜನತೆಗೆ ಮನವರಿಕೆ ಮಾಡಿಕೊಡಬೇಕಿದೆ: ರಮಾನಾಥ ರೈ

ಬಂಟ್ವಾಳ: ಮಹಾತ್ಮ ಗಾಂಧಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಬಳಿಕ ಸ್ವಾತಂತ್ರ್ಯ ಚಳವಳಿಗೆ ವೇಗ ಸಿಕ್ಕಿದರೂ ಎಲ್ಲಿಯೂ ಹಿಂಸೆ, ದೊಂಬಿಗೆ ಪ್ರಚೋದನೆ ನೀಡದೆ ಅಖಂಡ ಭಾರತಕ್ಕೆ ಸ್ವಾತಂತ್ರ್ಯವನ್ನು ತರುವಲ್ಲಿ ಯಶಸ್ವಿಯಾದ ಮಹಾತ್ಮ ಗಾಂಧಿಯವರ ಅಹಿಂಸಾ ಸಿದ್ಧಾಂತ ಇಂದಿನ ಯುವ ಜನತೆಗೆ ಮನವರಿಕೆ ಮಾಡಿಕೊಡುವ ಅನಿವಾರ್ಯ ಹೆಚ್ಚಿದೆ ಇದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ಗಾಂಧಿ ಜಯಂತಿ ಪ್ರಯುಕ್ತ ತಾಲೂಕಿನ ಪಚ್ಚನಡ್ಕ ತೊಡಂಬಿಲ ಚರ್ಚ್ ಹಾಲ್ ನಲ್ಲಿ ಶನಿವಾರ ನಡೆದ ಕಳ್ಳಿಗೆ, ಅಮ್ಮುಂಜೆ, ಕರಿಯಂಗಳ, ತೆಂಕಬೆಳ್ಳೂರು, ಬಡಗಬೆಳ್ಳೂರು, ಕುರಿಯಾಲ, ಅಮ್ಟಾಡಿ ಮತ್ತು ಅರಳ ವಲಯ ಕಾಂಗ್ರೆಸ್ ಸಮಿತಿ ಹಾಗೂ ಫಾದರ್ ಮುಲ್ಲರ್ ಆಸ್ಪತ್ರೆ ಮಂಗಳೂರು ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರ ಉಚಿತ ಕಣ್ಣಿನ ಮತ್ತು ಆರೋಗ್ಯ ತಪಾಸಣಾ ಶಿಬಿರ, ಉಚಿತ ಆರೋಗ್ಯ ಕಾರ್ಡ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಪ್ರಸಕ್ತ ಗಾಂಧಿ ಅವರ ಅಹಿಂಸೆ ಸಿದ್ಧಾಂತದ ಬಗ್ಗೆ ಮಾತನಾಡಬೇಕಾದ ಅನಿವಾರ್ಯ ಇದೆ. ಅನೇಕ ಜಾತಿ, ಧರ್ಮ, ಭಾಷೆಯ ಜನರನ್ನು ಒಳಗೊಂಡಿರುವ ಅಖಂಡ ಭಾರತವನ್ನು ಒಗ್ಗೂಡಿಸಿ ಅಹಿಂಸಾ ಮಾರ್ಗದ ಮೂಲಕ ಸ್ವಾತಂತ್ರ್ಯ ಹೋರಾಟ ಮಾಡುವುದು ಸುಲಭದ ಕೆಲಸ ಆಗಿರಲಿಲ್ಲ. ಆದರೂ ಮಹಾತ್ಮಾ ಗಾಂಧಿ ಅದರಲ್ಲಿ ಯಶಸ್ಸು ಖಂಡಿದ್ದಾರೆ. ಅದೇ ಮಾರ್ಗದಲ್ಲಿ ಇಂದು ನಾವೂ ಮುಂದುವರಿಯಬೇಕು ಎಂದು ಅವರು ಹೇಳಿದರು.

ವೇದಿಕೆಯಲ್ಲಿ ನಿಂತು ಗಾಂಧೀಜಿ ಬಗ್ಗೆ ಮಾತನಾಡುವುದು ಸುಲಭ. ಆದರೆ ಅವರ ಅಹಿಂಸಾ ಸಿದ್ದಾಂತ ನಾವೆಷ್ಟು ಪಾಲಿಸುತ್ತೇವೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡುವುದು ಕಷ್ಟ. ಅಹಿಂಸಾ ಚಳವಳಿಯನ್ನು ದೇಶಕ್ಕೆ ಪರಿಚಯಿಸಿದ ಮಹಾತ್ಮ ಗಾಂಧೀಜಿ ವೈರಿಯನ್ನು ಪ್ರೀತಿಸು ಎಂಬ ಸಂದೇಶವನ್ನು ಜಗತ್ತಿಗೆ ಸಾರಿದ್ದಾರೆ. ಯಾವ ಧರ್ಮವೂ ಹಿಂಸೆಯನ್ನು ಪ್ರೋತ್ಸಾಹಿಸುವುದಿಲ್ಲ. ಹಿಂಸೆಗೆ ಹಿಂಸೆ ಉತ್ತರವಲ್ಲ. ಹಿಂಸೆಗೆ ಅಹಿಂಸೆ ಉತ್ತರ. ಕೋಮುವಾದ, ಮತೀಯವಾದಕ್ಕೆ ಕೋಮುವಾದ ಮತೀಯವಾದ ಉತ್ತರ ಅಲ್ಲ. ಅದಕ್ಕೆ ಜಾತ್ಯತೀತವಾದವೇ ಉತ್ತರ ಎಂದು ಅವರು ಹೇಳಿದರು.

ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಾಮಾಜಿಕ ನ್ಯಾಯ ದೊರಕಬೇಕೆಂಬ ಕನಸು ಗಾಂಧೀಜಿಯವರದ್ದಾಗಿತ್ತು. ಪ್ರಜಾಪ್ರಭುತ್ವವನ್ನು ಬಲಪಡಿಸುವ ಕೆಲಸವನ್ನು ಗಾಂಧೀಜಿ ಮಾಡಿದ್ದಾರೆ. ಆದರೆ ಇಂದು ಪ್ರಜಾಪ್ರಭುತ್ವದ ಮೌಲ್ಯ ಕುಸಿಯುತ್ತಿದೆ. ಪ್ರಜಾಪ್ರಭುತ್ವವನ್ನು ಇನ್ನಷ್ಟು ಬಲಿಷ್ಠಗೊಳಿಸುವ ಕೆಲಸ ನಡೆಯಬೇಕು ಎಂದು ರೈ ಕರೆ ನೀಡಿದರು

ಮಹಾತ್ಮ ಗಾಂಧಿಯನ್ನು ಟೀಕೆ ಮಾಡುವ ಕೆಲಸ ಇಂದು ನಡೆಯುತ್ತದೆ. ದೇಶಕ್ಕಾಗಿ ಹುತಾತ್ಮ, ಬಲಿದಾನ ಮಾಡಿದವರಿಗೆ ಅಗೌರ, ಅಪಮಾನ ಮಾಡುವ ಕೆಲಸ ಸಲ್ಲದು. ದೇಶ ಎಂದರೆ ಒಂದು ವ್ಯಕ್ತಿ, ಒಂದು ಪಕ್ಷ, ಒಂದು ಸಂಘಟನೆ ಅಲ್ಲ. ಭಾರತ ಸುಂದರ ಮತ್ತು ಸಾಮರಸ್ಯದ ದೇಶ ಆಗಬೇಕು ಎಂದು ಅವರು ನುಡಿದರು. 

ಬಂಟ್ವಾಳ ತಾಲೂಕು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್, ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತ ನಿರ್ದೇಶಕ ಫಾದರ್ ಸಿಲ್ವೆಸ್ಟರ್ ವಿನ್ಸೆಂಟ್ ಲೋಬೋ, ರಕ್ತನಿಧಿ ಕೇಂದ್ರದ ಚಾರು ಕೋಸ್ಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಜಿಪಂ ಮಾಜಿ ಸದಸ್ಯರಾದ ಎಂ.ಎಸ್.ಮುಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಬಂಟ್ವಾಳ ತಾಪಂ ಮಾಜಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಬಂಟ್ವಾಳ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ವಿ. ಪೂಜಾರಿ, ಕಾಂಗ್ರೆಸ್ ಪ್ರಮುಖರಾದ ಸುದರ್ಶನ್ ಜೈನ್, ಸಂಜೀವ ಪೂಜಾರಿ, ಮಲ್ಲಿಕಾ ಶೆಟ್ಟಿ, ಫ್ಲೋಸಿ ಡಿಸೋಜ, ಮಲ್ಲಿಕಾ ಪಕ್ಕಳ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮೊದಲು ಗಾಂಧಿ ಜಯಂತಿಯ ಪ್ರಯುಕ್ತ ಕಳ್ಳಿಗೆ ಗ್ರಾಮದ ಪಚ್ಚಿನಡ್ಕದಲ್ಲಿ ನೂತನ ಗಾಂಧಿ ಕಟ್ಟೆಯನ್ನು ಬಿ.ರಮಾನಾಥ ರೈ ಲೋಕಾರ್ಪಣೆ ಮಾಡಿದರು. ಚಂದ್ರಶೇಖರ ಭಂಡಾರಿ ಸ್ವಾಗತಿಸಿದರು. ಬಂಟ್ವಾಳ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹೀಂ ನವಾಝ್ ಬಡಕಬೈಲ್ ವಂದಿಸಿದರು.‌ ಅಬ್ದುಲ್ ಹಕೀಂ ಕಲಾಯಿ‌ ಕಾಯಕ್ರಮ ನಿರೂಪಿಸಿದರು.


SHARE THIS

Author:

0 التعليقات: