Wednesday, 20 October 2021

ಉತ್ತರಾಖಂಡ ಪ್ರವಾಹ : 50ಕ್ಕೂ ಹೆಚ್ಚು ಮಂದಿ ಮೃತ್ಯು

ಉತ್ತರಾಖಂಡ ಪ್ರವಾಹ : 50ಕ್ಕೂ ಹೆಚ್ಚು ಮಂದಿ ಮೃತ್ಯು

ಡೆಹ್ರಾಡೂನ್: ಉತ್ತರಾಖಂಡ ಹಾಗೂ ಉತ್ತರ ಬಂಗಾಳದ ಹಿಮಾಲಯದ ತಪ್ಪಲು ಪ್ರದೇಶದಲ್ಲಿ ಮಳೆ ಮುಂದುವರಿದಿದ್ದು, ಪ್ರವಾಹ ಪೀಡಿತ ಉತ್ತರಾಖಂಡದಲ್ಲಿ ಮೃತರ ಸಂಖ್ಯೆ 52ನ್ನು ದಾಟಿದೆ. ಅಂತೆಯೇ ಉತ್ತರ ಬಂಗಾಳದಲ್ಲಿ ಮಳೆಸಂಬಂಧಿ ದುರಂತಗಳಿಗೆ ಐವರು ಬಲಿಯಾಗಿದ್ದಾರೆ.

ಏತನ್ಮಧ್ಯೆ ಭೂಕುಸಿತದಿಂದಾಗಿ ಎರಡು ದಿನಗಳಿಂದ ರಾಜ್ಯದ ಜತೆ ಸಂಪರ್ಕ ಕಡಿದುಕೊಂಡಿದ್ದ ನೈನಿತಾಲ್ ಹೆದ್ದಾರಿಯನ್ನು ತೆರವುಗೊಳಿಸಿರುವುದರಿಂದ ಈ ಪ್ರಸಿದ್ಧ ಗಿರಿಧಾಮಕ್ಕೆ ಸಂಚಾರ ಪುನರಾರಂಭವಾಗಿದೆ. ಉತ್ತರಾಖಂಡದಲ್ಲಿ 8000ಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಪ್ರವೇಶಗಳಿಗೆ ಕರೆದೊಯ್ಯಲಾಗಿದೆ ಎಂದು ಉತ್ತರಾಖಂಡ ಡಿಜಿಪಿ ಅಶೋಕ್ ಕುಮಾರ್ ಹೇಳಿದ್ದಾರೆ.

ಹರಿದ್ವಾರದಲ್ಲಿ ಗಂಗಾನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಪ್ರವಾಹದ ಸೆಳೆತಕ್ಕೆ ತಡೆಗೋಡೆಗಳಿಗೆ ಹಾನಿಯಾಗಿವೆ. ಉತ್ತರ ಬಂಗಾಳದಲ್ಲಿ ಪ್ರವಾಹಕ್ಕೆ ಐದು ಮಂದಿ ಬಲಿಯಾಗಿದ್ದು, ಜೈಗಾಂವ್ ಮತ್ತು ಅಲಿಪುರದೂರು ಎಂಬಲ್ಲಿ ತೋರ್ಷಾ ನದಿಯಲ್ಲಿ ಇಬ್ಬರು ಹೆಣ್ಣುಮಕ್ಕಳು ಕೊಚ್ಚಿಕೊಂಡು ಹೋಗಿದ್ದಾರೆ. ಬಿಹಾರದಲ್ಲಿ ಸಂಭವಿಸಿದ ವಾಯುಭಾರ ಕುಸಿತ ಬಿರುಗಾಳಿಯಾಗಿ ತೀವ್ರತೆ ಪಡೆದಿರುವುದರಿಂದ ಉತ್ತರ ಬಂಗಾಳದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಪ್ರವಾಹಕ್ಕೆ ಹಲವು ಸೇತುವೆಗಳು ಕುಸಿದಿದ್ದರೆ, ರಸ್ತೆಗಳು ಕೊಚ್ಚಿಕೊಂಡು ಹೋಗಿವೆ.

ಡಾರ್ಜಿಲಿಂಗ್, ಕಲೀಂಪಾಂಗ್, ಜಲಪೈಗುರಿ ಮತ್ತು ಅಲಿಪುರದೂರಿನಲ್ಲಿ ಗುರುವಾರ ಕೂಡಾ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹಲವೆಡೆ ಭೂಕುಸಿತಗಳು ಸಂಭವಿಸಿರುವುದರಿಂದ ಕಲೀಂಪಾಂಗ್ ರಾಜ್ಯದ ಜತೆ ಸಂಪರ್ಕ ಕಡಿದುಕೊಂಡಿದೆ. ಸೋಮವಾರದಿಂದ ಬುಧವಾರವರೆಗೆ 33.5 ಮಿಲಿಮೀಟರ್ ಮಳೆಯಾಗಿದ್ದು, 46 ಕಡೆ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.SHARE THIS

Author:

0 التعليقات: