Tuesday, 26 October 2021

ತಮಿಳುನಾಡಿನ ಪಟಾಕಿ ಮಳಿಗೆಯಲ್ಲಿ ಅಗ್ನಿ ದುರಂತ; 5 ಮಂದಿ ಸಾವು, 10 ಮಂದಿಗೆ ಗಾಯ


ತಮಿಳುನಾಡಿನ ಪಟಾಕಿ ಮಳಿಗೆಯಲ್ಲಿ ಅಗ್ನಿ ದುರಂತ; 5 ಮಂದಿ ಸಾವು, 10 ಮಂದಿಗೆ ಗಾಯ

ದೀಪಾವಳಿ ಹಬ್ಬ ಹತ್ತಿರವಿರುಗಾಲೇ ನಡೆಯಬಾರದ ದುರಂತವೊಂದು ನಡೆದು ಹೋಗಿದೆ. ಪ್ರತಿವರ್ಷ ತಮಿಳುನಾಡಿನಲ್ಲಿ ದೀಪಾವಳಿ ಸಮಯದಲ್ಲಿ ಅಗ್ನಿ ಅನಾಹುತಗಳು ನಡೆಯುತ್ತಲೇ ಇರುತ್ತವೆ. ಇದಕ್ಕೆ ಕಾರಣ ಪಟಾಕಿ. ಹೌದು, ಎಷ್ಟೇ ಮುಂಜಾಗ್ರತಾ ಕ್ರಮಗಳನ್ನು ಪಟಾಕಿ ಮಳಿಗೆಗಳು ತೆಗೆದುಕೊಂಡರೂ ಈ ರೀತಿಯ ದುರ್ಘಟನೆ ನಡೆಯುತ್ತಲೆ ಇದೆ. ಇದೀಗ ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯ ಶಂಕರಪುರಂ ಪಟ್ಟಣದ ಪಟಾಕಿ ಮಳಿಗೆಯಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು, ಐವರು ಸಾವನಪ್ಪಿದ್ದಾರೆ. ಘಟನೆಯಲ್ಲಿ ಹಲವರಿಗೆ ತೀವ್ರ ಗಾಯವಾಗಿದ್ದು, ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಅವರ ಸ್ಥಿತಿಯೂ ಗಂಭೀರ ಎಂದು ಹೇಳಲಾಗುತ್ತಿದೆ. ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನೂ ಮೃತಪಟ್ಟವರಿಗೆ ತಲಾ 5 ಲಕ್ಷ ರೂಪಾಯಿ, ಹಾಗೂ ಗಾಯಗೊಂಡವರಿಗೆ ತಲಾ 1 ಲಕ್ಷ ರೂಪಾಯಿ ಪರಿಹಾರವನ್ನು ಅಲ್ಲಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್​ ಘೋಷಿಸಿದ್ದಾರೆ. ಘಟನೆ ವೇಳೆ ಆಕಾಶದೆತ್ತರಕ್ಕೆ ಅಗ್ನಿಯ ಜ್ವಾಲೆ ಚಿಮ್ಮಿತ್ತು. ಸ್ಥಳೀಯರ ಮೊಬೈಲ್ ​ವೊಂದರಲ್ಲಿ ಈ ದೃಶ್ಯಗಳು ಸೆರೆಯಾಗಿದೆ.

ಚೆನ್ನೈನಿಂದ ಸುಮಾರು 262 ಕಿಲೋ ಮೀಟರ್​ ದೂರದಲ್ಲಿ ಶಂಕರಪುರಂ ಪಟ್ಟಣವಿದೆ. ಮಂಗಳವಾರ ಸಂಜೆ ಇಲ್ಲಿನ ಅಂಗಡಿಯೊಂದರಲ್ಲಿ ಘಟನೆ ನಡೆದಿದೆ. ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ದೀಪಾವಳಿ ಹಬ್ಬದ ಪ್ರಯುಕ್ತ ಹೆಚ್ಚಿನ ಪ್ರಮಾಣದಲ್ಲಿ ಪಟಾಕಿ ದಾಸ್ತಾನು ಮಾಡಿ, ಮಾರಾಟ ಮಾಡಲಾಗುತ್ತಿತ್ತು. ಇದೇ ವೇಳೆ ಬೆಂಕಿ ಹೊತ್ತಿಕೊಂಡಿದ್ದು, ಐವರು ಸಜೀವ ದಹನವಾಗಿದ್ದಾರೆ. ಇನ್ನೂ ಪಟಾಕಿ ಮಳಿಗೆ ಪಕ್ಕದಲ್ಲಿ ಬೇಕರಿ ಅಂಗಡಿಯ ನಾಲ್ಕು ಸಿಲಿಂಡರ್​ಗಳು ಸ್ಪೋಟಗೊಂಡಿದೆ. ಈ ಹಿನ್ನೆಲೆ ಬೆಂಕಿಯ ಜ್ವಾಲೆ ಮತ್ತಷ್ಟು ದೂರ ವ್ಯಾಪಿಸಿತ್ತು.

ಹೂವಿನ ವ್ಯಾಪಾರಿ ಸೇರಿ ಐವರು ಸಜೀವ ದಹನ

ಈ ದುರ್ಘಟನೆಯಲ್ಲಿ ರಸ್ತೆ ಬದಿ ಹೂವಿನ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿ ಸೇರಿ ಐವರು ಮೃತಪಟ್ಟಿದ್ದಾರೆ. ಪಟಾಕಿ ಮಳಿಗೆಯಲ್ಲಿ ಸಿಲುಕಿಕೊಂಡಿದ್ದವರ ರಕ್ಷಣೆ ಮಾಡಲಾಗಿದೆ, ಗಾಯಗೊಂಡವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿದೆ. ಸ್ಥಳದಲ್ಲಿ 2 ಗಂಟೆಗಳ ಕಾಲ ಅಗ್ನಿಶಾಮಕ ದಳ ಕಾರ್ಯನಿರ್ವಹಿಸಿ ಬೆಂಕಿ ಆರಿಸಿದ್ದಾರೆ. ಪಟಾಕಿ ಅಂಗಡಿ, ಬೇಕರಿ ಹಾಗೂ ಮೊಬೈಲ್​ ಶಾಪ್​​ನಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಇವರ ಸ್ಥಿತಿಯೂ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಶೇಕಡಾ 80 ರಿಂದ 90 ರಷ್ಟು ದೇಹದ ಭಾಗಗಳು ಸುಟ್ಟುಹೋಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಬೆಳಕಿನ ಹಬ್ಬ : ಪಟಾಕಿ ಬಗ್ಗೆ ಇರಲಿ ಎಚ್ಚರ

ಎಲ್ಲರ ಮನ, ಮನೆಗಳಲ್ಲಿ ಆವರಿಸಿಕೊಂಡಿರುವ ಕತ್ತಲು ಕಳೆಯುವ ದೀಪಾವಳಿ ಹಬ್ಬ ಹತ್ತಿರವಿದೆ. ಒಂದೆಡೆ ಪಟಾಕಿ ವ್ಯಾಪರ ನಡೆಸುವ ವೇಳೆ ಇತಂಹ ದುರ್ಘಟನೆಗಳು ನಡೆಯುತ್ತಿವೆ. ಇನ್ನೊಂದೆಡೆ ಮಕ್ಕಳ ಪೋಷಕರಲ್ಲಿ ಆತಂಕ ಶುರುವಾಗಿದೆ. ಪ್ರತಿವರ್ಷ ಹಬ್ಬದ ಸಮಯದಲ್ಲಿ ಹಲವರು ಬದುಕಲ್ಲಿ ಕತ್ತಲು ತುಂಬುತ್ತದೆ. ಈ ಬಾರಿ ಅಂತಹ ಅನಾಹುತಗಳು ನಡೆಯಬಾರದಂತೆ ಎಚ್ಚರಿಕೆ ವಹಿಸುವ ಅಗತ್ಯವಿದೆ. ಗುಣಮಟ್ಟದ ಪಟಾಕಿ ತಯಾರಿಕೆಗೆ ಖ್ಯಾತಿ ಪಡೆದಿರುವ ತಮಿಳುನಾಡಿನ ಶಿವಕಾಶಿಯಲ್ಲಿ ಇತ್ತೀಚೆಗೆ ನಕಲಿ ಸ್ಫೋಟಕ ಬಳಕೆ ಹೆಚ್ಚಿರುವುದು ಆತಂಕ ಮೂಡಿಸಿದೆ. ಇಲ್ಲಿಂದ ಕಡಿಮೆ ಬೆಲೆಗೆ ಕಳಪೆ ಗುಣಮಟ್ಟದ ರಸಾಯನಿಕ, ಸ್ಫೋಟಕಗಳನ್ನು ಸಾಮಗ್ರಿ ತಂದು ನಕಲಿ ಪಟಾಕಿ ತಯಾರಿಸುತ್ತಿದ್ದಾರೆ ಎಂಬ ಅನುಮಾನ ಮೂಡಿದೆ.



SHARE THIS

Author:

0 التعليقات: