Monday, 18 October 2021

ಉಡುಪಿ ಜಿಲ್ಲೆಯಲ್ಲಿ 3ಕ್ಕಿಳಿದ ಕೋವಿಡ್ ಪಾಸಿಟಿವ್


 ಉಡುಪಿ ಜಿಲ್ಲೆಯಲ್ಲಿ 3ಕ್ಕಿಳಿದ ಕೋವಿಡ್ ಪಾಸಿಟಿವ್

ಉಡುಪಿ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ ಇಂದು ಮೂರಕ್ಕಿಳಿದಿದೆ. ಮಾರ್ಚ್ ಮೊದಲ ವಾರದ ಬಳಿಕ ಬಂದ ಅತ್ಯಂತ ಕಡಿಮೆ ಪಾಸಿಟಿವ್ ಸಂಖ್ಯೆ ಇದಾಗಿದೆ. ದಿನದಲ್ಲಿ 33 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದರೆ, ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆಯೂ 44ಕ್ಕೆ ಇಳಿದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

ಇಂದು ಸಹ ಜಿಲ್ಲೆಯಲ್ಲಿ ಯಾರೂ ಕೋವಿಡ್‌ಗೆ ಬಲಿಯಾಗಿಲ್ಲ. ದಿನದಲ್ಲಿ ಸೋಂಕು ದೃಢಪಟ್ಟ ಮೂವರಲ್ಲಿ ಇಬ್ಬರು ಪುರುಷರು ಹಾಗೂ ಓರ್ವ ಮಹಿಳೆ. ಇವರಲ್ಲಿ ಇಬ್ಬರು ಉಡುಪಿ ತಾಲೂಕಿನವರಾದರೆ, ಒಬ್ಬರು ಕುಂದಾಪುರ ತಾಲೂಕಿನವರು. ಮೂವರಿಗೆ ಅವರದೇ ಮನೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇಂದು 33 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ 76,070ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 1238 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 76,589ಕ್ಕೇರಿದೆ. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 11,85,836 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.

6756 ಮಂದಿಗೆ ಲಸಿಕೆ: ಇಂದು ಜಿಲ್ಲೆಯಲ್ಲಿ ಒಟ್ಟು 6756 ಮಂದಿ ಕೋವಿಡ್ ಲಸಿಕೆಯನ್ನು ಸ್ವೀಕರಿಸಿದ್ದು, ಇವರಲ್ಲಿ 590 ಮಂದಿ ಮೊದಲ ಡೋಸ್ ಹಾಗೂ 6166 ಮಂದಿ ಎರಡನೇ ಡೋಸ್ ಸ್ವೀಕರಿಸಿದ್ದಾರೆ ಎಂದು ಡಿಎಚ್‌ಓ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.

ಲಸಿಕೆ ಪಡೆದವರಲ್ಲಿ 18 ವರ್ಷದಿಂದ 44 ವರ್ಷದೊಳಗಿನ 421 ಮಂದಿ ಮೊದಲ ಡೋಸ್ ಹಾಗೂ 3531 ಮಂದಿ ಎರಡನೇ ಡೋಸ್ ಲಸಿಕೆಯನ್ನು ಸ್ವೀಕರಿಸಿದರೆ, 45 ವರ್ಷ ಮೇಲಿನ 169 ಮಂದಿ ಮೊದಲ ಡೋಸ್ ಹಾಗೂ 2600 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಅಲ್ಲದೇ 16 ಮಂದಿ ಆರೋಗ್ಯ ಕಾರ್ಯಕರ್ತರು ಹಾಗೂ 19 ಮುಂಚೂಣಿ ಕಾರ್ಯಕರ್ತರು ಸಹ ಎರಡನೇ ಡೋಸ್ ಲಸಿಕೆ ಸ್ವೀಕರಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 9,07,222 ಮಂದಿ ಮೊದಲ ಡೋಸ್ ಹಾಗೂ 4,64,737 ಮಂದಿ ಎರಡನೇ ಡೋಸ್ ಲಸಿಕೆಯನ್ನು ಪಡೆದಿದ್ದಾರೆ.


SHARE THIS

Author:

0 التعليقات: