Saturday, 2 October 2021

ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಜಿಲ್ಲೆ ಅಧಿಕೃತವಾಗಿ ಅಸ್ತಿತ್ವಕ್ಕೆ


 ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಜಿಲ್ಲೆ ಅಧಿಕೃತವಾಗಿ ಅಸ್ತಿತ್ವಕ್ಕೆ

ಬಳ್ಳಾರಿ:ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಜಿಲ್ಲೆಯನ್ನು ಇಲ್ಲಿನ ಹೊಸಪೇಟೆಯ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. 

ಬಳ್ಳಾರಿ ಜಿಲ್ಲೆಯಲ್ಲಿ 11 ತಾಲೂಕುಗಳು ಮತ್ತು ಮೂರು ಕಂದಾಯ ಉಪವಿಭಾಗಳಿದ್ದವು. ಸದ್ಯ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆ ರಚಿಸಿರುವ ಕಾರಣ ಆರು ತಾಲೂಕುಗಳು ಹೊಸಪೇಟೆ, ಕೂಡ್ಲಿಗಿ, ಹಗರಿ ಬೊಮ್ಮನಹಳ್ಳಿ, ಕೊಟ್ಟೂರು, ಹೂವಿನಹಡಗಲಿ ಮತ್ತು ಹರಪನಹಳ್ಳಿ ಹೊಸ ಜಿಲ್ಲೆಗೆ ಸೇರ್ಪಡೆಯಾಗಿದೆ. ವಿಜಯನಗರ ಜಿಲ್ಲೆಗೆ ಹೊಸಪೇಟೆ ಜಿಲ್ಲಾಕೇಂದ್ರವಾಗಿರಲಿದೆ.

ಹೀಗಾಗಿ ಬಳ್ಳಾರಿ ಜಿಲ್ಲೆಯಲ್ಲಿ ಸದ್ಯ ಐದು ತಾಲೂಕುಗಳು ಉಳಿದಿವೆ. ಬಳ್ಳಾರಿ, ಸಿರಗುಪ್ಪ, ಸಂಡೂರು, ಕಂಪ್ಲಿ ಮತ್ತು ಕುರಗೋಡು ತಾಲೂಕುಗಳು ಬಳ್ಳಾರಿ ಜಿಲ್ಲೆಯಯಲ್ಲಿ ಮುಂದುವರಿಯಲಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರು, ಶಾಸಕರು, ಮಠಾಧೀಶರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ವಿಜಯನಗರ ಜಿಲ್ಲೆಯ ವಿಜಯಸ್ತಂಭವನ್ನು ಅನಾವರಣಗೊಳಿಸಲಾಗಿದೆ.

ಮರುಕಳಿಸಿದ ವಿಜಯನಗರ ವೈಭವ ನಾಡಿನ 80ಕ್ಕೂ ಹೆಚ್ಚು ಕಲಾತಂಡಗಳು ಭಾಗಿ

ನಾಡಿನ ವೈವಿಧ್ಯಮಯ ಕಲೆ ಅನಾವರಣ

ವಿಜಯನಗರ ಜಿಲ್ಲಾ ಉದ್ಘಾಟನಾ ಸಮಾರಂಭದ ನಿಮಿತ್ತ ವಡಕರಾಯ ದೇವಸ್ಥಾನದಿಂದ ರಥಬೀದಿಯಲ್ಲಿ ನಡೆದ ವಿಜಯನಗರ ವೈಭವ ಮೆರವಣಿಗೆಯು ನಾಡಿನ ವೈವಿಧ್ಯಮಯ ಕಲೆಯನ್ನು ಅನಾವರಣಗೊಳಿಸಿತು;ಇದರ ಜೊತೆಗೆ ವಿಜಯನಗರ ಅರಸರ ದರ್ಬಾರ್ ಕೂಡ ನೆನಪಿಸಿತು.

ವಡಕರಾಯ ದೇವಸ್ಥಾನದಿಂದ ಆರಂಭವಾಗಿ ಜಿಲ್ಲಾ ಕ್ರೀಡಾಂಗಣದವರೆಗೆ ವಿಜಯನಗರ ವೈಭವ ಕಾರ್ಯಕ್ರಮ ನಡೆಯಿತು. ಸ್ಥಳೀಯ ಕಲಾವಿದರು, ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ 80 ಕಲಾತಂಡಗಳ ಕಲಾವಿದರು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಪೂಜಾಕುಣಿತ, ಪಟಕುಣಿತ, ಗೊಂಬೆಕುಣಿತ, ಚಿಟ್ಟೆ ಮೇಳ, ಚಂಡಿವಾದ್ಯ, ಮಹಿಳಾ ಕಾಳಿ ಕುಣಿತ, ಮಹಿಳಾ ವೀರಗಾಸೆ, ನಗಾರಿ ವಾದ್ಯ, ಕಂಸಾಳೆ, ಜಗ್ಗಲಗಿ ಕುಣಿತ, ಡೊಳ್ಳು ಕುಣಿತ, ಕರಡಿ ಮಜಲು, ಹುಲಿವೇಷ, ಝಾಂಜ್ ಮೇಳ, ನವಿಲು ಕುಣಿತ, ತಾಷರಂಡೋಲ್, ಹಲಗೆ ವಾದನ, ವೀರಗಾಸೆ, ನಾದಸ್ವರ ವಾದನ, ಕಹಳೆ ವಾದನ, ಹಗಲುವೇಷಗಾರಿಕೆ, ಬೇಡರ ವೇಷ, ಉರುಮೆ ವಾದ್ಯ, ಕೋಲಾಟ, ಗೊರವರಕುಣಿತ ಸೇರಿದಂತೆ ವಿವಿಧ ಕಲಾ ಪ್ರಕಾರಗಳನ್ನು ಕಲಾವಿದರು ಪ್ರದರ್ಶಿಸಿದರು.

ಈ ಕಲಾತಂಡಗಳ ಜೊತೆಗೆ ಆಳ್ವಾಸ್ ಸಂಸ್ಥೆಯ 25 ಜನಕಲಾವಿದರು ಭಾಗವಹಿಸಿ ತಮ್ಮ ಕಲಾ ಪ್ರತಿಭೆಯನ್ನು ಮೆರವಣಿಗೆಯಲ್ಲಿ ಪ್ರದರ್ಶಿಸಿದರು.

ಈ ಮೆರವಣಿಗೆಯಲ್ಲಿ ತೆರೆದ ವಾಹನದಲ್ಲಿ ಸಿಂಗರಿಸಿದ ನಾಡದೇವತೆ ಭುವನೇಶ್ವರಿ ಮೂರ್ತಿ ಗಮನಸೆಳೆಯಿತು. ಇನ್ನೊಂದು ತೆರೆದ ವಾಹನದಲ್ಲಿ ವಿಜಯನಗರ ಸಾಮ್ರಾಜ್ಯದ ಶ್ರೇಷ್ಠ ಅರಸ ಶ್ರೀಕೃಷ್ಣದೇವರಾಯ ಮತ್ತು ಅವರ ದರ್ಬಾರ್(ಆಸ್ಥಾನ ಕವಿಗಳು),ವಿದ್ಯಾರಣ್ಯ ಶ್ರೀಗಳು ಹಾಗೂ ಇನ್ನೀತರ ಪ್ರಮುಖರ ವೇಷಧಾರಿಗಳು ಗಮನಸೆಳದರು.

ವಿಜಯನಗರ ಜಿಲ್ಲೆ ರಚನೆ ಯಶಸ್ವಿ: ಬೃಹತ್ ಕುಂಡದಲ್ಲಿ ವಿವಿಧ ತಾಲೂಕುಗಳ ಜ್ಯೋತಿ ಪ್ರಜ್ವಲನ

ವಿಜಯನಗರ ಜಿಲ್ಲಾ ಉತ್ಸವ ಮತ್ತು ವಿಜಯನಗರ ಜಿಲ್ಲಾ ಉದ್ಘಾಟನಾ ಅಂಗವಾಗಿ ವಿಜಯನಗರ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಹೊತ್ತುತಂದ ಜ್ಯೋತಿಗಳನ್ನು ಹಕ್ಕಬುಕ್ಕ ಮಹಾದ್ವಾರದ ಬಳಿ ಪ್ರತಿಷ್ಠಾಪಿಸಲಾಗಿರುವ ಶ್ರೀಕೃಷ್ಣದೇವರಾಯ ಪ್ರತಿಮೆ ಬಳಿಯ ಕುಂಡದಲ್ಲಿ ಜ್ಯೋತಿ ಪ್ರಜ್ವಲಿಸಲಾಯಿತು.

ವಿಜಯನಗರ ಜಿಲ್ಲೆಯ ಹೊಸಪೇಟೆ,ಕೂಡ್ಲಿಗಿ,ಹಗರಿಬೊಮ್ಮನಹಳ್ಳಿ,ಹಡಗಲಿ,ಹರಪನಹಳ್ಳಿ, ಕೊಟ್ಟೂರು ತಾಲೂಕುಗಳಿಂದ ತಾಲೂಕಾಡಳಿತ ಹಾಗೂ ತಾಲೂಕು ಹೋರಾಟಗಾರರು ಜೊತೆಗೂಡಿ ಹೊತ್ತು ತಂದ ಜ್ಯೋತಿಗಳನ್ನು ಶ್ರೀಕೃಷ್ಣದೇವರಾಯ ಪ್ರತಿಮೆ ಬಳಿಯ ಕುಂಡದಲ್ಲಿ ಜ್ಯೋತಿ ಪ್ರಜ್ವಲಿಸಲಾಯಿತು. ಪ್ರವಾಸೋದ್ಯಮ,ಪರಿಸರ ಹಾಗೂ ಜೀವಿಶಾಸ್ತ್ರ ಹಾಗೂ ಅವಳಿ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ವಿವಿಧ ತಾಲೂಕುಗಳ ಜ್ಯೋತಿಗಳನ್ನು ಬೃಹತ್ ಕುಂಡದಲ್ಲಿ ಪ್ರಜ್ವಲಿಸಿ ಹೋರಾಟಗಾರರೊಂದಿಗೆ ಖುಷಿ ಹಂಚಿಕೊಂಡರು.


SHARE THIS

Author:

0 التعليقات: